ಮೈಸೂರು: ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಪಿಎಂಶ್ರೀ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಪ್ರಧಾನ ಮಂತ್ರಿ ಸ್ಕೂಲ್ ಆಫ್ ರೈಸಿಂಗ್ ಇಂಡಿಯಾ ಎಂಬ ಹೆಸರಿನಲ್ಲಿ ಈ ಯೋಜನೆ ಶುರುವಾಗಿದ್ದು, ಮೈಸೂರಿನ 14 ಶಾಲೆಗಳು ಈ ಯೊಜನೆಯಡಿ ಆಯ್ಕೆಯಾಗಿವೆ. ಇದು ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾಗಿದೆ.
2022-23ನೇ ಸಾಲಿನಲ್ಲಿ 8 ಶಾಲೆಗಳು, 2023-24ನೇ ಸಾಲಿನಲ್ಲಿ 4 ಶಾಲೆಗಳು, ಇದೀಗ 2024-25ನೇ ಶಾಲೆಗೆ 2 ಶಾಲೆಗಳ ಆಯ್ಕೆಯಾಗಿದ್ದು, ಪ್ರತಿ ವರ್ಷ ಮೈಸೂರಿನ ಶಾಲೆಗಳು ಪಿಎಂಶ್ರೀ ಯೋಜನೆಯ ಸಾಲಿನಲ್ಲಿವೆ. ಮುಂದಿನ ವರ್ಷ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಸಾಧ್ಯತೆ ಇದೆ.
ಈ ಯೋಜನೆಯ ಮೂಲಕ ಕೇಂದ್ರದಿಂದ ಈಗಾಗಲೇ 1.53 ಕೋಟಿ ಅನುದಾನ ನೀಡಲಾಗಿದೆ. ಇದು ಶಾಲೆಗಳಿಗೆ ಮತ್ತಷ್ಟು ಅಭಿವೃದ್ಧಿ ಮಾಡುವುದಕ್ಕೆ ಸಹಕಾರಿಯಾಗಿದೆ. ಪಿಎಂಶ್ರೀ ಯೋಜನೆಯಡಿ ದೇಶದಲ್ಲಿ ಒಟ್ಟು 14,500 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸಿ, ಅಭಿವೃದ್ಧಿಪಡಿಸುವುದು ಯೋಜನೆಯ ಆಶಯವಾಗಿದೆ. ಇದರಿಂದ ಮಕ್ಕಳಿಗೆ ಅತ್ಯಾಧುನಿಕ ಮಾದರಿಯಲ್ಲಿ ಬೋಧನಾ ವ್ಯವಸ್ಥೆ ಸಿಗಲಿದೆ. ಈ ಯೋಜನೆಯ ಪ್ರಮುಖ ಉದ್ದೇಶ ಕೂಡ ಬೋಧನಾ ವ್ಯವಸ್ಥೆಯೂ ಉತ್ತಮವಾಗಿರಬೇಕು ಎಂಬುದು. ಅಷ್ಟೇ ಅಲ್ಲ ಉತ್ತಮ ಗುಣಮಟ್ಟದ ಆಕ್ಟಿವಿಟಿ ಕೂಡ ಈ ಮೂಲಕ ಸಿಗಲಿದೆ. ಪ್ರಾಥಮಿಕ, ಮಾಧ್ಯಮಿಕ ಹಾಗೂ ಹಿರಿಯ ಮಾಧ್ಯಮಿಕ ಶಾಲೆಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗುತ್ತದೆ. ಸರ್ಕಾರಿ ಶಾಲೆಯ ಸ್ಥಿತಿಗತಿ ಗಮನಿಸಿ ಈ ಯೋಜನೆಗೆ ಆಯ್ಕೆ ಮಾಡಲಾಗುವುದು. ಊರಿನ ಸಾಕ್ಷರತಾ ಪ್ರಮಾಣ..? ಹೆಣ್ಣು ಮಕ್ಕಳ ಸಂಖ್ಯೆ..? ಶಾಲೆಯ ಪರಿಸ್ಥಿತಿ ಎಲ್ಲವನ್ನು ಗಮನಿಸಿ ಆಯ್ಕೆ ಮಾಡುತ್ತಾರೆ.