ಚಿತ್ರದುರ್ಗ. ನ.11: 2024-25ನೇ ಸಾಲಿನ ನವೆಂಬರ್ ಮಾಹೆಯಲ್ಲಿ ವಾಯುಮಾಲಿನ್ಯದ ದುಷ್ಪಾರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬಿತ್ತಿಪತ್ರ ಹಾಗೂ ಕರಪತ್ರಗಳನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಬಿಡುಗಡೆಗೊಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸೋಮವಾರ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ವಾಯುಮಾಲಿನ್ಯ ನಿಯಂತ್ರಣಾ ಮಾಸಾಚರಣೆಗೆ ಚಾಲನೆ ನೀಡಿದರು.
ಸಾರಿಗೆ ಇಲಾಖೆ ವತಿಯಿಂದ ಪ್ರತಿ ವರ್ಷ ನವಂಬರ್ ಮಾಹೆಯಲ್ಲಿ ವಾಯು ಮಾಲಿನ್ಯ ನಿಯಂತ್ರಣಾ ಮಾಸಾಚರಣೆ ಆಚರಿಸುತ್ತಿದ್ದು, ವಾಹನಗಳ ಪ್ರದೋಷಣೆಯಿಂದ ಪರಿಸರದ ಮೇಲೆ ಆಗುವ ದುಷ್ಟಪರಿಣಾಮಗಳನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆಯನ್ನು ನವಂಬರ್-2024ರ ಮಾಸ ಪೂರ್ತಿಯಾಗಿ ಆಚರಿಸಲಾಗುತ್ತಿದ್ದು, ವಾಯುಮಾಲಿನ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಮೋನಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೇಸಿಂಘೆ ಸೇರಿದಂತೆ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸದಸ್ಯರು ಇದ್ದರು.