ಚಿತ್ರದುರ್ಗ: ವಾಣಿ ವಿಲಾಸ ಜಲಾಶಯ ಈ ವರ್ಷ ಕೋಡಿ ಬೀಳುವ ಎಲ್ಲಾ ನಿರೀಕ್ಷೆಗಳು ಮತ್ತೆ ಚಿಗುರೊಡೆದಿವೆ. ಕಳೆದ ಕೆಲವು ದಿನಗಳಿಂದ ಒಳಹರಿವು ನಿಂತು ಹೋಗಿತ್ತು. ಇನ್ನೇನು ಕೋಡಿ ಬೀಳಬೇಕು ಎನ್ನುವಷ್ಟರಲ್ಲಿ ಮಳೆಯೂ ನಿಂತಿದೆ. ಇದೀಗ ಮತ್ತೆ ಭರವಸೆ ಮೂಡಿದ್ದು, ವಾಣಿ ವಿಲಾಸ ಜಲಾಶಯಕ್ಕೆ ಒಳಹರಿವು ಶುರುವಾಗಿದೆ.
ಈ ಬಾರಿ ಮುಂಗಾರು ಮಳೆಯಿಂದಾನೂ ಉತ್ತಮ ಮಳೆಯಾಗಿರುವ ಕಾರಣ ಜಲಾಶಯಕ್ಕೆ ಒಳ್ಳೆಯ ನೀರು ಸಂಗ್ರಹಣೆಯಾಗಿತ್ತು. ಇನ್ನು ಕೆಲವೇ ಅಡುಗಳು ಬಾಕಿ ಇದ್ದಾಗಲೇ ಮಳೆ ನಿಂತು ಹೋಗಿತ್ತು. ಈಗ ಮತ್ತೆ ಒಳ ಹರಿವು ಆರಂಭದಿಂದ ಚಿತ್ರದುರ್ಗದ ಜನ ಖುಷಿಯಾಗಿದ್ದಾರೆ. ಇಂದು ಜಲಾಶಯಕ್ಕೆ 924 ಕ್ಯೂಸೆಕ್ ಒಳಹರಿವು ಇದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 127.40 ಅಡಿಯಾಗಿದೆ. ಹೀಗಾಗಿ ಡ್ಯಾಂ ಕೋಡಿ ಬೀಳುವುದಕ್ಕೆ 2.60 ಅಡಿ ನೀರು ಬರಬೇಕಿದೆ. ಇಷ್ಟು ಅಡಿ ನೀರು ಬಂದರೆ ಜಲಾಶಯ ಕೋಡಿ ಬೀಳಲಿದೆ.
ಭದ್ರ ಜಲಾಶಯದಿಂದ ಪಂಪ್ ಮೂಲಕ ನೀರನ್ನು ಹರಿಸಲಾಗುತ್ತಿದೆ. ಈ ಜಲಾಶಯ ಕೋಡಿ ಬಿದ್ದರೆ ಹಿರಿಯೂರಿನ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಾಯಿಯ ನೆನಪಿಗಾಗಿ ಕಟ್ಟಿಸಿದ ಜಲಾಶಯ ಇದಾಗಿದೆ. 1907ರಲ್ಲಿ ಕಟ್ಟಿಸಿದ ಅದ್ಭುತ ಜಲಾಶಯ ಇದಾಗಿದೆ. ಕಟ್ಟಿಸಿದಾಗಿನಿಂದ ಎರಡು ಬಾರಿ ಕೋಡಿ ಬಿದ್ದಿದ್ದು, ಮೂರನೇ ಬಾರಿಯೂ ಕೋಡಿ ಬೀಳುವ ನಿರೀಕ್ಷೆಯಲ್ಲಿ ಜನ ಕಾಯ್ತಿದ್ದಾರೆ. ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದರೆ ಸುತ್ತಮುತ್ತಲ ರೈತರ ಬೆಳೆಗೆ ಉತ್ತಮ ನೀರಿನ ವ್ಯವಸ್ಥೆ ಸಿಕ್ಕಂತೆ ಆಗುತ್ತದೆ. ಹಾಗೇ ಕುಡಿಯುವ ನೀರಿಗೂ ಸಮಸ್ಯೆಯಾಗುವುದಿಲ್ಲ.