ಸುದ್ದಿಒನ್, ಚಿತ್ರದುರ್ಗ, ನವೆಂಬರ್. 07 : 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 20 ರಿಂದ 22 ರವರೆಗೆ ಮೂರು ದಿನಗಳ ಕಾಲ ಮಂಡ್ಯದಲ್ಲಿ ಏರ್ಪಡಿಸಲಾಗಿದೆ. ಮೂರು ದಿನಗಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗಾಗಿ ರಾಜ್ಯ ಕಾರ್ಯಕಾರಿಣಿ ಸಭೆ ಶೀಘ್ರದಲ್ಲಿ ಜರುಗಲಿದೆ.
ರಾಜ್ಯದಲ್ಲಿ ಪ್ರಕ್ರಿಯೆಯಲ್ಲಿರುವ ಉಪ ಚುನಾವಣೆಗಳು ಮುಗಿದ ತಕ್ಷಣ ರಾಜ್ಯ ಕಾರ್ಯಕಾರಿಣಿ ಸಭೆ ಕರೆಯಲಾಗುವುದು. ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗೆ ಚಿತ್ರದುರ್ಗ ಜಿಲ್ಲೆಯಿಂದ ಮೂರು ಹೆಸರುಗಳನ್ನು ಪ್ರಸ್ತಾಪಿಸಲು ಜಿಲ್ಲಾ ಕಸಾಪ ನಿರ್ಧರಿಸಿದೆ.
ಸಾಹಿತ್ಯ ಮತ್ತು ಕೆರೆಗಳಿಗೆ ನೀರು ತುಂಬಿಸುವ ಕಾರ್ಯದಿಂದ ಜಿಲ್ಲೆ ಮತ್ತು ರಾಜ್ಯದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುವ ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು, ಸಾಹಿತಿ ಮತ್ತು ಇತಿಹಾಸಕಾರ ಡಾ.ಬಿ.ರಾಜಶೇಖರಪ್ಪ ಖ್ಯಾತ ಸಾಹಿತಿ ಬಿ.ಎಲ್.ವೇಣು ರವರನ್ನು ಹೆಸರುಗಳನ್ನು ಪ್ರಸ್ತಾಪಿಸಲು ಜಿಲ್ಲಾ ಕಸಾಪ ನಿರ್ಧರಿಸಿದೆ.
ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಹಲವಾರು ಚರ್ಚೆಗಳು ಜರುಗುತ್ತಿವೆ. ಜಿಲ್ಲೆಯಲ್ಲಿ ಈ ಮೂವರನ್ನು ಹೊರುತುಪಡಿಸಿ ಇನ್ನಷ್ಟು ಸಾಹಿತಿಗಳು ಅರ್ಹರಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಅವರುಗಳಿಗೆ ಆದ್ಯತೆ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ ಈ ಮೂವರ ಹೆಸರುಗಳನ್ನು ಚಿತ್ರದುರ್ಗ ಜಿಲ್ಲೆಯ ವತಿಯಿಂದ ರಾಜ್ಯ ಕಾರಿಣಿ ಸಭೆಯಲ್ಲಿ ಪ್ರಸ್ತಾಪಿಸಲು ನಿರ್ಧರಿಸಲಾಗಿದೆ. ಸಮ್ಮೇಳನಾಧ್ಯಕ್ಷರ ಅಂತಿಮ ನಿರ್ಧಾರ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅಂತಿಗೊಳ್ಳಲಿದೆ. ಈ ಬಗ್ಗೆ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿಯವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.