ಮೈಸೂರು: ಮೂಡಾ ಕೇಸ್ ಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಇಂದು ಲೋಕಾಯುಕ್ತ ಪೊಲೀಸರ ಎದುರು ಹಾಜರಾಗಿದ್ದರು. ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದ ಕಾರಣ ಹಾಜರಾಗಿದ್ದರು. ಸುನಾರು ಎರಡು ಗಂಟೆಗಳ ಕಾಲ ಲೋಕಾಯುಕ್ತ ಅಧಿಕಾರಿಗಳು ಸಿದ್ದರಾಮಯ್ಯ ಅವರ ವಿಚಾರಣೆ ನಡೆಸಿದ್ದಾರೆ. ಅವರಿಗೆ ಬೇಕಾದ ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಬಳಿಕ ಲೋಕಾಯುಕ್ತದಿಂದ ಸಿಎಂ ಸಿದ್ದರಾಮಯ್ಯ ಅವರು ಹೊರಟಿದ್ದಾರೆ.
ವಿಚಾರಣೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಲೋಕಾಯುಕ್ತ ಅಧಿಕಾರಿಗಳು ಮತ್ತೆ ವಿಚಾರಣೆಗೆ ಬರುವಂತೆ ಹೇಳಿಲ್ಲ. ಕಾನೂನು ಪ್ರಕಾರವೇ ನಿವೇಶನ ಪಡೆದಿದ್ದೇನೆ. ಆದರೆ ಬಿಜೆಪಿ ಮತ್ತು ಜೆಡಿಎಸ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿವೆ. ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಮತ್ತೆ ಬರಬೇಕಾಗುತ್ತದೆ ಎಂಬುದನ್ನು ಸಹ ಹೇಳಿಲ್ಲ ಎಂದಿದ್ದಾರೆ.
ಇದೆ ವೇಳೆ ಮೂಡಾ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಬಿಜೆಪಿಯವರು ಆಗ್ರಹಿಸುತ್ತಿರುವ ಬಗ್ಗೆ ಮಾತನಾಡಿ, ಬಿಜೆಪಿಯವರು ಯಾವುದಾದರೂ ಕೇಸನ್ನ ಸಿಬಿಐಗೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಲೋಕಾಯುಕ್ತ ಸ್ವತಂತ್ರವಾಗಿ ತನಿಖೆ ಮಾಡುತ್ತಿರುವ ಸಂಸ್ಥೆ. ಲೋಕಾಯುಕ್ತ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗೆ ಉತ್ತರಿಸಿದ್ದೇನೆ. ಎಲ್ಲವೂ ಕೂಡ ಕಾನೂನು ಪ್ರಕಾರವೆ ನಡೆದಿದೆ. ಬಿಜೆಪಿ, ಜೆಡಿಎಸ್ ನವರು ಮಾಡಿದ ಸುಳ್ಲು ಆರೋಪಗಳಿಗೆ ಕೋರ್ಟ್ ನಲ್ಲಿ ಉತ್ತರಿಸುತ್ತೇನೆ ಎಂದಿದ್ದಾರೆ.
ಮೂಡಾ ಪ್ರಕರಣದಲ್ಲಿ ಈಗಾಗಲೇ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಾಕಷ್ಟು ಹೋರಾಟ ಮಾಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೂ ಒಪ್ಪಿಗೆ ನೀಡಿದ್ದಾರೆ. ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಆಮೇಲೆ ಪ್ರಕರಣದ ತನಿಖೆ ಎದುರಿಸಿ ಎಂದೇ ವಿಪಕ್ಷ ನಾಯಕರು ಆಗ್ರಹಿಸಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಅವರು ತಾವೂ ತಪ್ಪು ಮಾಡಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದರು. ಇದೀಗ ವಿಚಾರಣೆಯನ್ನು ಎದುರಿಸಿದ್ದಾರೆ.