ಬೆಂಗಳೂರು: ವಿಪರೀತ ಬೆನ್ನು ನೋವಿನ ಸಮಸ್ಯೆಯಿಂದ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದಾರೆ. ನಿನ್ನೆಯೇ ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಾರೆ. ದರ್ಶನ್ ನಿನ್ನೆ ಅಪಾರ್ಟ್ಮೆಂಟ್ ನಿಂದ ಹೊರಟಾಗಿನಿಂದ ಹಿಡಿದು ಆಸ್ಪತ್ರೆ ಸೇರುವ ತನಕವೂ ಮೀಡಿಯಾದವರು ಕವರೇಜ್ ಮಾಡಿದ್ದರು. ಚಿಕಿತ್ಸೆಯ ಇಂಚಿಂಚು ಮಾಹಿತಿಯನ್ನು ಪ್ರಸಾರ ಮಾಡಲಾಗಿತ್ತು. ವೈದ್ಯರ ಬಳಿ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಇದೀಗ ದರ್ಶನ್ ಅವರ ಚಿಕಿತ್ಸೆಯ ಯಾವ ವಿಚಾರವನ್ನು ಹೊರಗೆ ಹೇಳದಂತೆ ಮನವಿ ಮಾಡಿದ್ದಾರೆ.
ಬಿಜಿಎಸ್ ಆಸ್ಪತ್ರೆಯ ಮಂಡಳಿ ಜೊತೆಗೆ ವಿಜಯಲಕ್ಷ್ಮೀ ವೈಯಕ್ತಿಕವಾಗಿ ಮನವಿ ಮಾಡಿದ್ದು, ದರ್ಶನ್ ಅವರ ಚಿಕಿತ್ಸೆಯ ವಿಚಾರಗಳನ್ನು ಗೌಪ್ಯವಾಗಿಡುವಂತೆ ಮನವಿ ಮಾಡಿದ್ದಾರೆ. ಬಿಜಿಎಸ್ ಆಸ್ಪತ್ರೆಯ ಆಡಳಿತ ಮಂಡಳಿ ಕೂಡ ಇದಕ್ಕೆ ಒಪ್ಪಿದ್ದು, ವೈದ್ಯರಿಗೂ ತಾಕೀತು ಮಾಡಿದ್ದು, ದರ್ಶನ್ ಅವರ ಹೆಲ್ತ್ ರಿಪೋರ್ಟ್ ನೀಡದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದರು. ಬಳ್ಳಾರಿ ಜೈಲು ಸೇರಿದ ಮೇಲೆ ಬೆನ್ನು ನೋವು ಅತಿಯಾಗಿ ಕಾಡಿತ್ತು. ಹೀಗಾಗಿ ಅದರ ಚಿಕಿತ್ಸೆಯ ಭಾಗವಾಗಿ ಜಾಮೀನು ಪಡೆದಿದ್ದಾರೆ. ಇನ್ನು ಆರು ವಾರಗಳ ಕಾಲ ಚಿಕಿತ್ಸೆಗಾಗಿಯೇ ಬಳಸಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಹೀಗಾಗಿ ಚಿಕಿತ್ಸೆ ಪಡೆಯಲು ದರ್ಶನ್ ಆಸ್ಪತ್ರೆ ಸೇರಿದ್ದಾರೆ. ಈಗಾಗಲೇ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಗಿದೆ. ಹಲವು ಪರೀಕ್ಷೆಯ ವರದಿ ಬಂದಿದ್ದು, ಇನ್ನಷ್ಟು ಪರೀಕ್ಷೆಗಳ ವರದಿ ಬರಬೇಕಿದೆ. ವರದಿ ಆಧರಿಸಿ ಯಾವ ರೀತಿಯ ಚಿಕಿತ್ಸೆ ನೀಡಬಹುದು ಎಂಬುದರ ಬಗ್ಗೆ ವೈದ್ಯರು ಅವಲೋಕಿಸುತ್ತಾರೆ. ಸದ್ಯಕ್ಕೆ ಫಿಸಿಯೋಥೆರಪಿಯನ್ನು ಆರಂಭಿಸಿದ್ದಾರೆ. ಆದಷ್ಟು ಬೇಗ ಹುಷರಾಗಿ ಬಾಸ್ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.