ಸುದ್ದಿಒನ್ |ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಹಲವು ಟೀಕೆಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಸುಳ್ಳು ಭರವಸೆಗಳ ವಿರುದ್ಧ ಜಾಗೃತರಾಗಬೇಕು ಎಂದು ಕರೆ ನೀಡಿದರು.
ಪ್ರಧಾನಿ ಮೋದಿ ಎಕ್ಸ್ ಪ್ಲಾಟ್ ಫಾರಂನಲ್ಲಿ ಟೀಕಿಸಿದ್ದಾರೆ. “ನೀವು ಕಾಂಗ್ರೆಸ್‌ಗೆ ಮತ ಹಾಕಿದರೆ ಆ ಪಕ್ಷವು ಆಡಳಿತ ನಡೆಸುವುದಿಲ್ಲ, ಬದಲಾಗಿ ಆರ್ಥಿಕತೆ ದುರ್ಬಲಗೊಳ್ಳುತ್ತದೆ ಮತ್ತು ಲೂಟಿ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಜನರು ಜಾಗೃತರಾಗಬೇಕು. ಹರಿಯಾಣದ ಜನರು ಅವರ ಸುಳ್ಳಗಳನ್ನು ಹೇಗೆ ತಿರಸ್ಕರಿಸಿದರು ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಭಾರತದ ಜನರು ಅಭಿವೃದ್ಧಿಯನ್ನು ಬಯಸುತ್ತಾರೆ. ಕಾಂಗ್ರೆಸ್‌ನ ನಕಲಿ ಭರವಸೆಯಲ್ಲ! #FakePromisesOfCongress
ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ರಾಜಕೀಯದ ಬಗ್ಗೆ…
”ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಆಂತರಿಕ ರಾಜಕಾರಣದಲ್ಲಿ ನಿರತವಾಗಿದೆ.ಅಭಿವೃದ್ಧಿ ಮಾಡಲು ಹೆಣಗಾಡುತ್ತಿದೆ.ಅಷ್ಟೇ ಅಲ್ಲ, ಈಗಿರುವ ಯೋಜನೆಗಳನ್ನು ಹಿಂದಕ್ಕೆ ಪಡೆಯಲು ಹೊರಟಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸರ್ಕಾರಿ ನೌಕರರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಭರವಸೆ ನೀಡಿದ ಸಾಲ ಮನ್ನಾಕ್ಕಾಗಿ ರೈತರು ಎದುರು ನೋಡುತ್ತಿದ್ದಾರೆ. ಈ ಹಿಂದೆ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಅವರು ಕೆಲವು ಯೋಜನೆಗಳ ಬಗ್ಗೆ ಭರವಸೆ ನೀಡಿದ್ದರು. ಆ ಯೋಜನೆಗಳು ಐದು ವರ್ಷಗಳವರೆಗೆ ಜಾರಿಯಲ್ಲಿ ಇರಲಿಲ್ಲ. ಕಾಂಗ್ರೆಸ್ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ,’’ ಎಂದು ಪ್ರಧಾನಿ ಮೋದಿ ಹೇಳಿದರು.
ಇಂದು ಕಾಂಗ್ರೆಸ್ ಸರಕಾರ ಇರುವ ಯಾವುದೇ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಭರವಸೆಗಳನ್ನು ಈಡೇರಿಸುತ್ತಿಲ್ಲ. ಇದು ನಿಜವಾಗಿಯೂ ನಂಬಿ ಮತ ಹಾಕಿದ ಜನರಿಗೆ ಮೋಸ ಮಾಡುತ್ತಿದೆ. ಇಂತಹ ರಾಜಕಾರಣಕ್ಕೆ ಬಡವರು, ಯುವಕರು, ಮಹಿಳೆಯರು, ರೈತರು ಬಲಿಯಾಗಿದ್ದಾರೆ. ಜಾರಿಯಾಗದ ಭರವಸೆಗಳನ್ನು ನೀಡುವುದು ಸುಲಭ, ಆದರೆ ಅನುಷ್ಠಾನಗೊಳಿಸುವುದು ಕಷ್ಟ ಎಂಬುದು ಕಾಂಗ್ರೆಸ್ ಪಕ್ಷಕ್ಕೂ ಅರಿವಾಗಿದೆ. ಚುನಾವಣೆಗೂ ಮುನ್ನ ಬಹಳಷ್ಟು ಆಶ್ವಾಸನೆಗಳನ್ನು ನೀಡುತ್ತಾರೆ. ಅವುಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವೇ ಇಲ್ಲ ಎಂಬುದು ಅವರಿಗೂ ಗೊತ್ತಿದೆ,’’ ಎಂದು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಟೀಕಿಸಿದ್ದಾರೆ.