ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದ ನಟ ದರ್ಶನ್ ಗೆ ಹೈಕೋರ್ಟ್ ರಿಲೀಫ್ ನೀಡಿದೆ. ಹೈಕೋರ್ಟ್ ನಿಂದ ಮಧ್ಯಂತರ ಜಾಮೀನು ಮಂಜೂರು ಆಗಿದೆ. ಷರತ್ತು ಬದ್ಧ ಜಾಮೀನನ್ನು ನೀಡಿದೆ. ದರ್ಶನ್ ಅವರ ಆರೋಗ್ಯದ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಜಾಮೀನು ಮಂಜೂರು ಮಾಡಲಾಗಿದೆ.
ದರ್ಶನ್ ಅವರಿಗೆ ಜಾಮೀನು ನೀಡಲು ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಈ ಹಿಂದೆ ಕೆಳಹಂತದಲ್ಲಿ ಸಲ್ಲಿಸಲಾಗಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಬಳಿಕ ಹೈಕೋರ್ಟ್ ಗೆ ಅರ್ಜ ಹಾಕಲಾಗಿತ್ತು. ಕಳೆದ ಕೆಲವು ದಿನಗಳಿಂದ ವಿಪರೀತ ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಅವರಿಗೆ ಸದ್ಯ ಹೈಕೋರ್ಟ್ ಮದ್ಯಂತರ ಜಾಮೀನು ನೀಡಿದೆ. ಚಿಕಿತ್ಸೆ ತಡವಾದರೆ ಪಾಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಇದ್ದ ಕಾರಣ ಜಾಮೀನು ಮಂಜೂರು ಮಾಡಲಾಗಿದೆ.
ಮೆಡಿಕಲ್ ರಿಪೋರ್ಟ್ ಗೆ ಸಂಬಂಧಿಸಿದಂತೆ ಎರಡು ಕಡೆಯ ವಾದವನ್ನು ಕೋರ್ಟ್ ಆಲಿಸಿತ್ತು. ಈ ವೇಳೆ ನ್ಯಾಯಮೂರ್ತಿ ವಿಶ್ವೇಶ್ವರ ಭಟ್, ‘ವೈದ್ಯಕೀಯ ಚಿಕಿತ್ಸೆ ವಿಚಾರಣಾಧೀನ ಕೈದಿಯ ಹಕ್ಕು’ ಎಂದು ಉಲ್ಲೇಖಿಸಿ, ಷರತ್ತು ಬದ್ಧ ಜಾಮೀನು ನೀಡಿದ್ದಾರೆ. ಎಸ್ ಪಿ ಪಿ ಮನವಿ ಮೇರೆಗೆ ಪಾಸ್ ಪೋರ್ಟ್ ವಶಕ್ಕೆ ಪಡೆಯಲಾಗಿದೆ. ದರ್ಶನ್ ಅವರು ಇಚ್ಛಿಸಿದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬಹುದಾಗಿದೆ.
ದರ್ಶನ್ ಅವರಿಗೆ ಜಾಮೀನು ಸಿಕ್ಕಿರುವುದು ಅಭಿಮಾನಿಗಳಿಗೆ ಸಂತಸ ತಂದುಕೊಟ್ಟಿದೆ. ಆರು ವಾರಗಳ ಕಾಲ ಸಂಪೂರ್ಣವಾಗಿ ಚಿಕಿತ್ಸೆಗೆ ಮಾತ್ರ ಬಳಕೆ ಮಾಡಿಕೊಳ್ಳಬೇಕಿದೆ. ಚಿಕಿತ್ಸೆಯ ವಿವರವನ್ನು ಕೋರ್ಟ್ ಗೆ ಸಲ್ಲಿಸಲೇಬೇಕಿದೆ. ಈ ರೀತಿ ಷರತ್ತು ವಿಧಿಸಲಾಗಿದೆ. ಇನ್ನು ದರ್ಶನ್ ಅವರಿಗೆ ಜಾಮೀನು ಮಂಜೂರು ಆಗುತ್ತಿದ್ದಂತೆ ವಿಜಯಲಕ್ಷ್ಮೀ ದರ್ಶನ್, ಸೋಷಿಯಲ್ ಮೀಡಿಯಾದಲ್ಲಿ ದೇವರಿಗೆ ಧನ್ಯವಾದ ತಿಳಿಸಿದ್ದಾರೆ.