ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 29 : ಜಿಲ್ಲಾ ವಕೀಲರ ಸಂಘ, ವಕೀಲರ ಬಳಗದ ಸಂಯುಕ್ತಾಶ್ರಯದಲ್ಲಿ ನ್ಯಾಯಾಲಯದ ಮುಂಭಾಗದಲ್ಲಿ ರಾಜವೀರ ಮದಕರಿ ನಾಯಕ ನಾಟಕ ಪ್ರದರ್ಶನವನ್ನು ಅಕ್ಟೋಬರ್ 31 ರ ರಾತ್ರಿ 7ಕ್ಕೆ ಹಮ್ಮಿಕೊಳ್ಳಲಾಗಿದೆ.
ಎರಡು ತಿಂಗಳಿಗೂ ಹೆಚ್ಚು ಕಾಲ ವಕೀಲರ ಸಂಘದ ಕಚೇರಿಯಲ್ಲಿ ತರಬೇತಿ ನಡೆಸಿದ್ದ ವಕೀಲರು, ಅ.12ರಂದು ನಾಟಕ ಪ್ರದರ್ಶನ ಆಯೋಜಿಸಿದ್ದರು. ಆದರೆ, ಮಳೆ ಹೆಚ್ಚಾಗಿದ್ದರಿಂದ ಅಕ್ಟೋಬರ್ 31ರಂದು ಮುಂದೂಡಲಾಗಿತ್ತು. ಈಗ ನಾಟಕ ಪ್ರದರ್ಶನ ದಿನ ಸಮೀಪಗೊಂಡಿದ್ದು, ತೀವ್ರ ಕುತೂಹಲ ಮೂಡಿಸಿದೆ. ಪ್ರತಿನಿತ್ಯ ಕಕ್ಷಿದಾರರ ಪರ ವಕಾಲತ್ತು ವಹಿಸಿ, ನ್ಯಾಯಕೊಡಿಸುವಲ್ಲಿ ಮಗ್ನರಾಗುತ್ತಿದ್ದರು. ಆದರೆ, ಮೊದಲ ಬಾರಿಗೆ ಸಾಮಾಜಿಕ ನಾಟಕ ಪ್ರದರ್ಶನ ನಡೆಸಿದ್ದ ವಕೀಲರು, ಮದಕರಿ ಜಯಂತ್ಯುತ್ಸವ ಅಂಗವಾಗಿ ಪ್ರಥಮ ಬಾರಿಗೆ ಐತಿಹಾಸಿಕ ರಾಜವೀರ ಮದಕರಿ ನಾಯಕ ನಾಟಕ ಪ್ರದರ್ಶನಕ್ಕೆ ಸಿದ್ಧತೆಗೊಂಡಿದೆ.
ನಾಟಕ ಪ್ರದರ್ಶನಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಟಿ.ವೆಂಕಟೇಶ್ ಚಾಲನೆ ನೀಡಿದ್ದು, ಜಿಲ್ಲಾ ಪ್ರಧಾನ ನ್ಯಾಯಾಧೀಶ ರೋಣ್ ವಾಸುದೇವ್, ಸಹಾಯಕ ಜಿಲ್ಲಾ ನ್ಯಾಯಾಧೀಶ ಎಸ್.ಎನ್.ಕಲ್ಕಣಿ, ಸಿ.ಎಚ್.ಗಂಗಾಧರ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ರಾಜ್ಯ ವಕೀಲ ಪರಿಷತ್ತಿನ ಸದಸ್ಯರಾದ ಗೌತಮ್ ಚಂದ್, ಶ್ರೀನಿವಾಸ್ ಬಾಬು, ರಾಜಣ್ಣ, ದೇವರಾಜು ಭಾಗವಹಿಸಲಿದ್ದಾರೆ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ನಾಟಕದ ಸಾರಥ್ಯವನ್ನು ವಕೀಲರಾದ ಎನ್.ಶರಣಪ್ಪ ವಹಿಸಲಿದ್ದು, ವ್ಯವಸ್ಥಾಪಕರು ಮತ್ತು ನಿರ್ದೇಶಕರಾಗಿ ಮಾಜಿ ಅಧ್ಯಕ್ಷ ಎಸ್.ವಿಜಯಕುಮಾರ್, ಪಿ.ಆರ್.ವೀರೇಶ್ ನಿರ್ವಹಿಸುತ್ತಾರೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಕೀಲರ ಕಾರ್ಯಕ್ಕೆ ಪ್ರೋತ್ಸಾಹಿಸಬೇಕೆಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ.ಶಿವುಯಾದವ್ ತಿಳಿಸಿದ್ದಾರೆ.