ಚಿತ್ರದುರ್ಗ | ಒಳ ಮೀಸಲಾತಿ ಜಾರಿಗೆ ಮಾದಿಗ ಮಹಾಸಭಾ ಒತ್ತಾಯ

2 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 25 : ಮಾದಿಗ ಮಹಾಸಭಾದವರು ಜಾಲಿಕಟ್ಟೆ ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶುಕ್ರವಾರ ತಮಟೆ ಬಾರಿಸುತ್ತ ಪಾದಯಾತ್ರೆ ಮೂಲಕ ಆಗಮಿಸಿ ಒಳ ಮೀಸಲಾತಿಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಿದರು.

ಒಳ ಮೀಸಲಾತಿ ಜಾರಿಗಾಗಿ ಮೂವತ್ತು ವರ್ಷಗಳಿಂದಲೂ ಹೋರಾಟ ಮಾಡುತ್ತಿದ್ದೇವೆ. ಇಲ್ಲಿಯವರೆಗೂ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್. ಮಾದಿಗರನ್ನು ವಂಚಿಸಿಕೊಂಡು ಬರುತ್ತಿವೆಯೇ ವಿನಃ ಒಳ ಮೀಸಲಾತಿಯನ್ನು ಜಾರಿಗೆ ತರುವ ಮನಸ್ಸು ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್‍ರವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಅಧಿವೇಶನದಲ್ಲಿಯೇ ಒಳ ಮೀಸಲಾತಿಯನ್ನು ಜಾರಿಗೊಳಿಸುವುದಾಗಿ ಚಿತ್ರದುರ್ಗದಲ್ಲಿ ನಡೆದ ಎಸ್ಸಿ.ಎಸ್ಟಿ.ಸಮಾವೇಶದಲ್ಲಿ ಭರವಸೆ ನೀಡಿ. ಅನೇಕ ತಿಂಗಳುಗಳೆ ಉರುಳಿದೆ. ಶೇ.90 ರಷ್ಟು ಮಾದಿಗ ಜನಾಂಗ ಇಲ್ಲಿಯವರೆಗೂ ಕಾಂಗ್ರೆಸ್‍ಗೆ ಮತ ನೀಡುತ್ತಾ ಬರುತ್ತಿದೆ. ಎಲ್ಲಾ ಪಕ್ಷಗಳು ದಲಿತರನ್ನು ಮತ ಬ್ಯಾಂಕನ್ನಾಗಿ ಬಳಸಿಕೊಳ್ಳುತ್ತಿದ್ದಾರೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆಯೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದಕ್ಕೆ ರಾಜ್ಯ ಸರ್ಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿರುವುದನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಮಾದಿಗರಿಗೆ ಸಾಮಾಜಿಕ ನ್ಯಾಯ ನೀಡಬೇಕೆಂಬ ಕಳಕಳಿಯಿದ್ದರೆ ಕೂಡಲೆ ಒಳ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಹುಲ್ಲೂರು ಕುಮಾರ್ ಮಾತನಾಡಿ ಸುಪ್ರೀಂಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆಯಾ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚಿಕೆಯಾಗಬೇಕೆಂಬುದು ನಮ್ಮ ಕನಸು. ಒಳ ಮೀಸಲಾತಿ ಜಾರಿಯಾಗುವತನಕ ಎಲ್ಲಾ ನೇಮಕಾತಿಗಳನ್ನು ರದ್ದುಪಡಿಸಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ದ ಮತಚಲಾಯಿಸಿ ತಕ್ಕ ಪಾಠ ಕಲಿಸಬೇಕಾಗುತ್ತದೆಂದು ಎಚ್ಚರಿಸಿದರು.

ಇದೆ ತಿಂಗಳ 28 ರಂದು ನಡೆಯುವ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ ಒಳ ಮೀಸಲಾತಿ ನೀಡುವ ಕುರಿತು ತೀರ್ಮಾನ ಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷೆ ವಹಿಸಿದ್ದೇ ಆದಲ್ಲಿ ರಾಜ್ಯಾದ್ಯಂತ ಮಾದಿಗ ಮಹಾಸಭಾದಿಂದ ಉಗ್ರವಾದ ಹೋರಾಟ ಮಾಡಲಾಗುವುದೆಂದರು.

ತಿಪ್ಪೇಸ್ವಾಮಿ, ಬಸವರಾಜ್, ಗೌತಮ್, ಸುನೀಲ್, ರೇಣುಕಮ್ಮ, ದುರುಗಮ್ಮ, ಮಾರುತಿ, ಪ್ರತಾಪ್, ಡಿ.ರಾಜಣ್ಣ, ಶಿವಣ್ಣ, ತಿಪ್ಪೇಸ್ವಾಮಿ ಬೆಳಗಟ್ಟ ಸೇರಿದಂತೆ ಮಾದಿಗ ಮುಖಂಡರುಗಳು ಪ್ರತಿಭಟನೆಯಲ್ಲಿದ್ದರು.

 

Share This Article
Leave a Comment

Leave a Reply

Your email address will not be published. Required fields are marked *