ಚನ್ನಪಟ್ಟಣ: ಉಪಚುನಾವಣೆಯ ರಣಕಣ ಈಗಿನಿಂದ ರಂಗೇರಿದೆ. ಸಿಪಿ ಯೋಗೀಶ್ವರ್ ಕೈಕೊಟ್ಟ ಮೇಲೆ ಬಿಜೆಪಿ ನಾಯಕರು ಮತ್ತು ಜೆಡಿಎಸ್ ನಾಯಕರು ಒಟ್ಟುಗೂಡಿ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕಣಕ್ಕೆ ಇಳಿಸಿದ್ದಾರೆ. ಪಕ್ಷ ಬಿಟ್ಟು ಹೋದವರಿಗೆ ಹೆದರುವ ಅವಶ್ಯಕತೆ ಇಲ್ಲ. ಗೆದ್ದೇ ಗೆಲ್ಲುತ್ತೇವೆ ಎಂಬ ಮಂತ್ರವನ್ನು ಮೈತ್ರಿ ಪಕ್ಷ ಜಪಿಸಿದೆ. ಇಂದು ನಿಖಿಲ್ ಕುಮಾರಸ್ವಾಮಿ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ಬಿಜೆಪಿಯ ಘಟಾನುಘಟಿ ನಾಯಕರೇ ಸಾಥ್ ನೀಡಿದ್ದು ಗಮನ ಸೆಳೆದಿದೆ.
ಆರ್ ಅಶೋಕ್, ಸದಾನಂದ ಗೌಡ್ರು, ಅಶ್ವತ್ಥ್ ನಾರಾಯಣ್ ಹೀಗೆ ದೊಡ್ಡ ದೊಡ್ಡವರೇ ನಿಖಿಲ್ ಬೆನ್ನೆಲುಬಾಗಿ ನಿಂತಿದ್ದಾರೆ. ಮೆರವಣಿಗೆ ಮೂಲಕ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಜೊತೆಗೆ ಹೋಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ವೇಳೆ ಆರ್ ಅಶೋಕ್ ಮಾತನಾಡಿ, ಮುಖಂಡರಿಂದ ಕಾರ್ಯಕರ್ತರ ತನಕ ಎಲ್ಲರೂ ಶ್ರಮವಹಿಸಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕಿದೆ. ನಿಖಿಲ್ ಗೆ ಮೋದಿ, ದೇವೇಗೌಡರ ಆಶೀರ್ವಾದವಿದೆ. ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.
ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ಮಾತನಾಡಿ, ನಿಖಿಲ್ ಎನ್‌ಡಿಎ ಅಭ್ಯರ್ಥಿ. ಬಿಜೆಪಿ ಮತ್ತು ಜೆಡಿಎಸ್ ನ ಒಗ್ಗಟ್ಟಿನ ಅಭ್ಯರ್ಥಿ. ಚನ್ನಪಟ್ಟಣದ ಜನ ಪ್ರಬುದ್ಧರು. ಕೆಂಗಲ್ ಹನುಮಂತಯ್ಯನವರಿಂದ ದೇವೇಗೌಡರು ಪ್ರತಿನಿಧಿಸಿರುವ ಕ್ಷೇತ್ರ. ಕಾಂಗ್ರೆಸ್ ನಿಂದ ಏನನ್ನು ಬಯಸಲು ಸಾಧ್ಯವಿಲ್ಲ. ಆದರೆ ಎನ್‌ಡಿಎ ಜನರ ಪರವಾಗಿದೆ ಎಂದಿದ್ದಾರೆ. ಮಾಜಿ ಸಿಎಂ ಸದಾನಂದ ಗೌಡ ಮಾತನಾಡಿ, ಇದು ಸವಾಲಿನ ಚುನಾವಣೆ. ಒಬ್ಬ ವ್ಯಕ್ತಿ ಪಕ್ಷ ಅಂತ ಹೇಳಿ ಪಕ್ಷ ಅಂತ ಹೇಳಿ ಏಳನೇ ಬಾರಿಗೆ ಜಿಗಿದಿದ್ದಾರೆ. ಇದು ಸ್ವಾರ್ಥದ ರಾಜಕಾರಣ. ಯೋಗೀಶ್ವರ್ ಮಾನ ಮರ್ಯಾದೆ ಇದ್ದರೆ ನೀರು ತಂದ ಭಗೀರಥ ಅನ್ನೋದನ್ನ ಬಿಟ್ಟು ಚುನಾವಣೆ ಎದುರಿಸಬೇಕು ಎಂದಿದ್ದಾರೆ.