ರಾಮನಗರ: ರಾಜ್ಯದಲ್ಲಿ ಘೋಷಣೆಯಾದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿರುವುದು ಚನ್ನಪಟ್ಟಣ ಕ್ಷೇತ್ರ. ಇಡೀ ರಾಜ್ಯ ಮಾತ್ರವಲ್ಲ ದೆಹಲಿಯಲ್ಲಿ ಕುಳಿತ ಹೈಕಮಾಂಡ್ ನಾಯಕರಿಗೂ ತಲೆಕೆಡಿಸಿದಂತ ಕ್ಷೇತ್ರವಾಗಿ ಬದಲಾಯ್ತು. ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸ್ಪರ್ಧಿಯೇ ಕಾಂಗ್ರೆಸ್ ಗೆ ಬಂದರು. ಈಗ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಸ್ಪರ್ಧೆ ಮಾಡೋದು ಯಾರೂ ಎಂಬ ಪ್ರಶ್ನೆ ಎದುರಾಗಿದೆ. ಯಾರೇ ನಿಂತರು ಗೆದ್ದು ಬರುವ ವಿಶ್ವಾಸದಲ್ಲಿರುವ ಸಿಪಿ ಯೋಗೀಶ್ವರ್ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಚನ್ನಪಟ್ಟಣದ ಕಾಂಗ್ರೆಸ್ ಮುಖಂಡರೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ಬಂದ ಸಿಪಿ ಯೋಗೀಶ್ವರ್ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಮೆರವಣಿಗೆಯ ವೇಳೆ ಡಿಕೆ ಸುರೇಶ್ ಅವರು ಸಿಪಿ ಯೋಗೀಶ್ವರ್ ಜೊತೆಗೆ ಮೆರವಣಿಗೆ ಬಂದಿದ್ದಾರೆ. ಜೊತೆಗೆ ಸಚಿವ ರಾಮಲಿಂಗಾ ರೆಡ್ಡಿ, ಚೆಲುವರಾಯಸ್ವಾಮಿ, ಹೆಚ್ ಎಂ ರೇವಣ್ಣ ಅವರು ಕೂಡ ಸಿಪಿ ಯೋಗೀಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಜೊತೆಯಾಗಿದ್ದಾರೆ.
ಸಿಪಿ ಯೋಗೀಶ್ವರ್ ನೇರವಾಗಿ ಈಗ ಕುಮಾರಸ್ವಾಮಿ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ. ಅಭ್ಯರ್ಥಿ ಯಾರನ್ನೇ ನಿಲ್ಲಿಸಿದರೂ ಸೋಲಿಸಲೇಬೇಕೆಂದು ಹಠ ತೊಟ್ಟಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಸಿಪಿ ಯೋಗೀಶ್ವರ್ ಗೆ ಗಾಳ ಹಾಕಿದ್ದಂತ ಡಿಸಿಎಂ ಡಿಕೆ ಶಿವಕುಮಾರ್ ಗೆಲ್ಲುವ ಕುದುರೆಯನ್ನೇ ಕರೆ ತಂದಿದ್ದಾರೆ. ಆರಂಭದಲ್ಲಿ ಡಿಕೆ ಸುರೇಶ್ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಇದೀಗ ಸಿಪಿ ಯೋಗೀಶ್ವರ್ ಪಕ್ಷ ಸೇರಿದ ಮೇಲೆ ಅವೆಇಗೆ ಟಿಕೆಟ್ ನೀಡಿ, ಎಲ್ಲರೂ ಜೊತೆಯಾಗಿ ನಿಂತಿದ್ದಾರೆ.