ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬೆಂಗಳೂರು ನಗರ ಆಯುಕ್ತ ಕಮಲ್ ಪಂಥ್ ಸೇರಿದಂತೆ ಹಲವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಆರ್ಟಿಐ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ, ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದರು. ಅವರ ದೂರು ಆಧರಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಯಾವುದೇ ಎಫ್ಐಆರ್ ದಾಖಲು ಮಾಡಿರಲಿಲ್ಲ. ಈ ಸಂಬಂಧ ಪೊಲೀಸರು ಕರ್ತವ್ಯ ಲೋಪದಡಿ ಆದರ್ಶ್ ಅಯ್ಯರ್ ಎಂಬುವವರು ಖಾಸಗಿ ದೂರು ದಾಖಲಿಸಿದ್ದರು. ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್, ಡಿಸಿಪಿ ಎಮ್ ಎನ್ ಅನುಚೇತ್, ಇನ್ಸಪೆಬಿ ಮಾರುತಿ ವಿರುದ್ಧ ದೂರು ದಾಖಲಾಗಿತ್ತು.
ಈ ಸಂಬಂಧ ನಗರದ 8ನೇ ಎಸಿಎಂಎಂ ಕೋರ್ಟ್ ತನಿಖೆ ನಡೆಸಲು ಆದೇಶ ಹೊರಡಿಸಿತ್ತು. ಅದನ್ನ ಪ್ರಶ್ನಿಸಿ ನಾಲ್ವರು ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ಯಾವುದೇ ಕರ್ತವ್ಯಲೋಪ ಎಸಗಿಲ್ಲ. ಅಲ್ಲದೆ, ದೂರುದಾರರು ಸಂತ್ರಸ್ಥೆಗೆ ಸಂಬಂಧಿಸಿದ ವಿವರಗಳನ್ನು ಆರಂಭದಲ್ಲಿ ಒದಗಿಸಿರಲಿಲ್ಲ. ಪ್ರಕರಣದಲ್ಲಿ ಆರೋಪಿತ ಮಾಜಿ ಸಚಿವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಈ ಮಧ್ಯೆ ಖಾಸಗಿ ದೂರು ಆಧರಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ತಮ್ಮ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್ ಹೊರಡಿಸಿರುವ ಆದೇಶ ರದ್ದು ಮಾಡಬೇಕು ಎಂದು ಅಧಿಕಾರಿಗಳು ಕೋರಿದ್ದರು. ಇದೀಗ ನಾಲ್ವರು ಅಧಿಕಾರಿಗಳ ವಿಚಾರಣೆಗೆ ಕೋರ್ಟ್ ಮಧ್ಯಂತರ ತಡೆ ನೀಡಿದೆ.