ಬೆಂಗಳೂರು: ಕುಟುಂಬ ರಾಜಕಾರಣ ಈಗ ಎಲ್ಲಾ ಪಕ್ಷದಲ್ಲೂ ಮುಂದುವರೆದಿದೆ ಎಂಬುದು ಸಾಬೀತಾಗಿದೆ. ಈಗ ಪರಿಷತ್ ಚುನಾವಣೆ ಗರಿಗೆದರಿದ್ದು, ಎಲ್ಲಾ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿಯಾಗಿದೆ. ಇನ್ನೇನಿದ್ರು ಮತ ಪ್ರಚಾರ ಬೇಟೆ ಶುರುವಾಗಬೇಕಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಸ್ವಲ್ಪ ಆಕ್ರೋಶಿತರಾಗಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಕುಟುಂಬ ರಾಜಕಾರಣ ನಡೆದಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಟ್ವಿಟ್ಟರ್ ನಲ್ಲಿ ಈ ಬಗ್ಗೆ ಮಾಹಿತಿ ಹಾಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಂದೀಪ್ ಸುರ್ಜೇವಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನ ಟ್ಯಾಗ್ ಮಾಡಿದ್ದಾರೆ.
ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸೋದರ ಸಂಬಂಧಿ ಎಸ್ ರವಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ್ ಹಟ್ಟಿಹೊಳಿ, ಶಾಸಕ ಎಂ ಬಿ ಪಾಟೀಲ್ ಸಂಬಂಧಿ, ಶಾಸಕ ರಾಜಶೇಖರ್ ಹುಮನಬಾದ್ ಸೋದರನಿಗೆ ಟಿಕೆಟ್ ನೀಡಿರುವುದು ಈ ಟೀಕೆಗೆ ಕಾರಣವಾಗಿದೆ. ಕುಟುಂಬಸ್ಥರಿಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ತಮ್ಮದೇ ನಾಯಕರ ವಿರುದ್ಧ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ. ಪ್ರಭಾಕರ ರೆಡ್ಡಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ.