ಬೆಂಗಳೂರು: ಅದ್ಯಾಕೋ ಏನೋ ಕ್ಲೀನ್ ಹ್ಯಾಂಡ್ ಆಗಿದ್ದುಕೊಂಡು ಇಷ್ಟು ವರ್ಷ ರಾಜಕೀಯ ಪಯಣ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಒಂದರ ಮೇಲೊಂದು ಆರೋಪಗಳು ಕೇಳಿ ಬರುತ್ತಿವೆ. ಇದೀಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಿದ್ದರಾಮಯ್ಯ ಅವರ ವಿರುದ್ಧ ಲಂಚ ಪ್ರಕರಣದ ಆರೋಪ ಮಾಡಿದ್ದಾರೆ. ಟರ್ಫ್ ಕ್ಲಬ್ ಮೆಂಬರ್ ಶಿಪ್ ನೀಡಲು 1.30 ಕೋಟಿ ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಮಾತನಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಟರ್ಫ್ ಕ್ಲಬ್ ಕೇಸಿನಲ್ಲಿ ಸ್ಟೂವರ್ಡ್ ಮಾಡಲು ಚೆಕ್ ನಲ್ಲಿ 1.30 ಕೋಟಿ ಪಡೆದವರು ಸಿದ್ದರಾಮಯ್ಯ. ಸಿದ್ದರಾಮಯ್ಯನವರು ಹೇಗೆ ಭ್ರಷ್ಟಾಚಾರ ರಹಿತರಾಗುತ್ತಾರೆ..? ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು 1997ರ ನಂತರದ ಎಲ್ಲಾ ಕಡತಗಳನ್ನು ಕಾರಿನಲ್ಲಿ ತುಂಬಿಸಿ ತಂದಿದ್ದಾರೆ. ಅವು ಎಲ್ಲಿ ಹೋಗಿದೆ ಎಂದು ಕೇಳಿದರೆ, ಸುಟ್ಟು ಹಾಕಲಾಗಿದೆ ಎಂದು ದೂರಿದ್ದಾರೆ. ಮುಖ್ಯಮಂತ್ರಿಗಳು ತಮ್ಮ ಪರಮಾಪ್ತ ಮೂಡಾ ಅಧ್ಯಕ್ಷ ಮರೀಗೌಡರ ರಾಜೀನಾಮೆ ಪಡೆದಿದ್ದು ಯಾಕೆ ? ಅವರ ರಾಜೀನಾಮೆ ಪಡೆದು ಅವರ ಮೇಲೆ ಹಗರಣವನ್ನು ಹೊರಿಸಲು ಹೊರಟಿದ್ದಾರೆ.
ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು. ಭೈರತಿ ಸುರೇಶ್ ಅವರನ್ನು ತಕ್ಷಣ ಬಂಧಿಸಬೇಕು. ಭೈರತಿ ಸುರೇಶ್ ಬಂಧನವಾದರೆ ಸತ್ಯ ತಕ್ಷಣಕ್ಕೆ ಹೊರ ಬರಲಿದೆ. ಅವರ ತನಿಖೆ ನಡೆಸಬೇಕಿದೆ, ತಪಾಸಣೆ ಮಾಡಬೇಕಿದೆ. ಅವರು ತಂದ ಕಡತಗಳ ವಿವರವನ್ನು ಪಡೆದುಕೊಳ್ಳಬೇಕಿದೆ. ಸರ್ಕಾರದ ಬೊಕ್ಕಸದ ಹಣ ಕೂಡ ಇಂದು ಕಾಂಗ್ರೆಸ್ ಪಕ್ಷಕ್ಕೆ ವರ್ಗಾವಣೆಯಾಗುತ್ತಿದೆ. ಸಿದ್ದರಾಮಯ್ಯ ಅವರು ಬಹಳ ಪರಿಶುದ್ಧ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ ಈಗ ಅವರ ಶುದ್ಧತೆಯ ಒಂದೊಂದೆ ಮುಖವಾಡ ಕಳಚಿ ಬೀಳುತ್ತಿವೆ ಎಂದಿದ್ದಾರೆ.