ಬೆಂಗಳೂರು : ವಾಲ್ಮೀಕಿ ಹಗರಣದಲ್ಲಿ ಬಂಧಿಯಾಗಿದ್ದ ಬಿ.ನಾಗೇಂದ್ರ ಅವರು ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಜಮೀರ್ ಅಹ್ಮದ್ ಜೊತೆಗೂಡಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ನಾಗೇಂದ್ರ ಅವರಿಗೆ ಸಿದ್ದರಾಮಯ್ಯ ಅವರು ಹೊಸದೊಂದು ಟಾಸ್ಕ್ ನೀಡಿದ್ದಾರಂತೆ.
ಸದ್ಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕ ಅನೌನ್ಸ್ ಆಗಿದೆ. ಇ.ತುಕಾರಾಂ ಪ್ರತಿನಿಧಿಸುತ್ತಿದ್ದ ಸಂಡೂರು ಕ್ಷೇತ್ರ ತೆರವಾಗಿದೆ. ಈ ಕ್ಷೇತ್ರದ ಮೇಲೆ ಬಿಜೆಪಿ ಕೂಡ ಕಣ್ಣಿಟ್ಟಿದೆ. ಅದಕ್ಕೆ ಪ್ರತಿಯಾಗಿ ಇಂದು ಜನಾರ್ದನ ರೆಡ್ಡಿ ಅವರು ಬಳ್ಳಾರಿಯಲ್ಲಿ ಗೃಹ ಪ್ರವೇಶ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ಸಹ ಈ ಕ್ಷೇತ್ರವನ್ನು ಗೆಲ್ಲಬೇಕೆಂದು ಪಣತೊಟ್ಟಿದ್ದಾರೆ. ಆ ಹೊಣೆಗಾರಿಕೆ ಈಗ ನಾಗೇಂದ್ರ ಅವರ ಹೆಗಲ ಮೇಲಿದೆ.
ಕಾಂಗ್ರೆಸ್ ನಿಂದ ಯಾರೇ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಎಂದು ಹೇಳಿದ್ದಾರೆ. ಇನ್ನು ಸಂಡೂರಿನಲ್ಲಿ ಇ.ತುಕರಾಂ ಅವರ ಫ್ಯಾಮಿಲಿಗೇನೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಆದರೆ ಸ್ಥಳೀಯವಾಗಿ ಇದಕ್ಕೆ ವಿರೋಧವಿರುವ ಕಾರಣ, ತಕ್ಷಣದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ.
ಒಟ್ಟಾರೆ ರಾಜ್ಯದಲ್ಲಿ ಮತ್ತೊಮ್ಮೆ ಎಲೆಕ್ಷನ್ ಬಿಸಿ ಜೋರಾಗಿದೆ. ಉಪಚುನಾವಣೆಯಲ್ಲೂ ಪ್ರತಿಷ್ಠೆಯ ಕಣ ಸೃಷ್ಟಿಯಾಗಿದೆ. ಅದರಲ್ಲೂ ಚನ್ನಪಟ್ಟಣಕ್ಕೆ ಮೊದಲ ಆದ್ಯತೆ ಇತ್ತು. ಈಗ ಸಂಡೂರು ಸದ್ದು ಮಾಡುವುದಕ್ಕೆ ಶುರುವಾಗಿದೆ. ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲಬೇಕೆಂದು ಸಿಎಂ ಒತ್ತಿ ಒತ್ತಿ ಹೇಳ್ತಾ ಇದ್ರೆ, ಅಲ್ಲಿ ನೋಡೇ ಬಿಡೋಣಾ ಅಂತ ಜನಾರ್ದನ ರೆಡ್ಡಿ ಬಳ್ಳಾರಿಗೆ ಹೆಜ್ಜೆ ಇಟ್ಟಿದ್ದಾರೆ. ರಣಕಣದಲ್ಲಿ ಗೆಲುವು ಯಾರಿಗೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.