ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಸದ್ಯ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಪರ ವಾದ ಮಂಡಿಸುತ್ತಿರುವ ವಕೀಲ ನಾಗೇಶ್ ಅವರು, ಪೊಲೀಸರು ನೀಡಿರುವ ಸಾಕ್ಷಿಗಳೇ ಸುಳ್ಳೆಂದು ವಾದ ಮಂಡಿಸುತ್ತಿದ್ದಾರೆ. ಇಂದು ಕೂಡ ಕೋರ್ಟ್ ನಲ್ಲಿ ವಾದ ಮಂಡಿಸಿರುವ ನಾಗೇಶ್ ಅವರು, ಟವರ್ ಲೊಕೇಷನ್, ರೇಣುಕಾಸ್ವಾಮಿ ದೇಹದಲ್ಲಿ ರಕ್ತಸ್ರಾವವಾಗಿದ್ದು ಈ ಎಲ್ಲವೂ ಸುಳ್ಳೆಂದೆ ವಾದಿಸಿದ್ದಾರೆ.
ಸಿವಿ ನಾಗೇಶ್ ಅವರು ಸಾಕ್ಷಿಯೊಬ್ಬನ ಹೇಳಿಕೆಯನ್ನು ತಡವಾಗಿ ದಾಖಲು ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸಾಕ್ಷಿಗಳ ಟವರ್ ಲೋಕೇಷನ್, ಸಾಕ್ಷಿಯೊಬ್ಬನ ಹೇಳಿಕೆಯನ್ನು ತಡವಾಗಿ ದಾಖಲಿದ್ದಾರೆ. ಮರಣೋತ್ತರ ವರದಿ ಬಂದ ಬಳಿಕ ಆ ವರದಿಯನ್ನು ಪುರಸ್ಕರಿಸುವಂತೆ ಸಾಕ್ಷಿಯಿಂದ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ. ಇದು ಪ್ಲಾಂಟ್ ಮಾಡಲಾದ ಸಾಕ್ಷಿ. ಆ ಸಾಕ್ಷಿ ತಿರುಪತಿ, ಗೋವಾ, ಹಾಸನ ಎಲ್ಲೆಲ್ಲೋ ಓಡಾಡಿದ್ದಾನೆ ಎಂದು ಪೊಲೀಸರು ಹೇಳಿರುವುದು ಸುಳ್ಳು. ಆ ಸಾಕ್ಷಿ ಬೆಂಗಳೂರಿನಲ್ಲಿಯೇ ಇದ್ದ. ಆದರೆ ಮರಣೋತ್ತರ ವರದಿ ಬರುವ ತನಕ ಕಾದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಅದಕ್ಕೆ ಹೋಲಿಕೆಯಾಗುವಂತೆ ಹೇಳಿಕೆಯನ್ನು ಪಡೆಯಲಾಗಿದೆ.
ಇದನ್ನು ಮುಚ್ಚಿಡಲೆಂದೇ ರಿಮ್ಯಾಂಡ್ ಅರ್ಜಿಯನ್ನು ನೀಡಲಾಗಿರಲಿಲ್ಲ ಹಾಗೂ ಕೇಸ್ ಡೈರಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಲಾಗಿತ್ತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈ ಪ್ರತ್ಯಕ್ಷ ಸಾಕ್ಷಿ ಬಿಟ್ಟರೆ ಬೇರೆ ಸಾಕ್ಷಿಯೇ ಇಲ್ಲ. ಇದನ್ನು ಬಿಟ್ಟರೆ ಕೃತ್ಯ ಸಾಬೀತುಪಡಿಸುವಂತ ಒಂದಂಶವೂ ಇಲ್ಲ. ಹಾಗಾಗಿ ಸಾಕ್ಷಿಯನ್ನು ಪ್ಲಾಂಟ್ ಮಾಡಲಾಗಿದೆ. ರೇಣುಕಾಸ್ವಾಮಿ ಮೈಮೇಲೆ 1.25 ಸೆಂಟಿ ಮೀಟರ್ ಗಾಯಗಳಾಗಿವೆ. ಇವುಗಳಿಂದ ಹೆಚ್ಚು ರಕ್ತಸ್ರಾವ ಆಗುವುದೇ ಇಲ್ಲ. ಆದರೆ ಪೊಲೀಸರು ಉದ್ದೇಶಪೂರ್ವಕವಾಗಿಯೇ ರಕ್ತಸ್ರಾವವಾಗಿದೆ, ಕೋಲು, ಬಟ್ಟೆಗಳ ಮೇಲೆ ರಕ್ತದ ಕಲೆಗಳಿದಾವೆ ಎಂದಿದ್ದಾರೆ ಎಂದು ನಾಗೇಶ್ ಅವರು ವಾದ ಮಂಡಿಸಿದ್ದಾರೆ.