ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು 15 ಜನ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ, ದಾಖಲಾತಿಗಳನ್ನ ಪರಿಶೀಲಿಸಿದ್ದಾರೆ. ಅದರಲ್ಲಿ ಕೆಎಎಸ್ ಅಧಿಕಾರಿ ಎಲ್ ಸಿ ನಾಗರಾಜ್ ಮನೆ ಕೂಡ ಒಂದು.
ಮನೆ ಮೇಲೆ ದಾಳಿ ನಡೆದದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾಗರಾಜ್ ಅವರು, ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪ ಮಾಡಿದ್ದಾರೆ. ಪದೇ ಪದೇ ದಾಳಿ ನಡೆಯುತ್ತಿದೆ. ಹಾಗಂತ ದಾಳಿಗೆ ಹೆದರಿ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.
ನಾನು ಪ್ರಾಮಾಣಿಕವಾಗಿದ್ದೇನೆ. ಅಧಿಕಾರಿಯೊಬ್ಬರು ಬೇಕಂತಲೇ ದಾಳಿ ಮಾಡಿದ್ದಾರೆ. ನನ್ನನ್ನು ಗುರಿಯಾಗಿಸಿ ಇದು ಮೂರನೇ ಬಾರಿ ದಾಳಿ ನಡೆದಿರುವುದು. ನನ್ನ ಪತ್ನಿಗೆ ಸಂಬಂಧ ಪಟ್ಟ ಆಸ್ತಿ ಮಾರಾಟ ಮಾಡಲು ಯತ್ನಿಸಿದ್ದೆ. ನನ್ನ ಬಳಿ ದಾಖಲೆ ಇದೆ. ಯಾರೋ ಬೇರೆ ಉದ್ದೇಶ ಇಟ್ಟುಕೊಂಡು ದಾಳಿ ಮಾಡಿದ್ದಾರೆ. ನನ್ನ ಅತ್ತೆಯ ಆರೋಗ್ಯಕ್ಕಾಗಿ ಹಣ ತಂದು ಇಟ್ಟಿದ್ದೆ. ನನ್ನ ಬಳಿ ಎಲ್ಲವೂ ದಾಖಲೆಗಳಿವೆ ಎಂದು ನಾಗರಾಜ್ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.