ಮಂಗಳೂರು : ಬಂಟ್ವಾಳದ ಕಾರಿಂಜದ ಜನಜಾಗೃತಿ ಸಭೆಯಲ್ಲಿ ಭಾಷಣ ಮಾಡುತ್ತಿದ್ದಾಗ ಜಿಲ್ಲಾಧಿಕಾರಿ ವಿರುದ್ಧ ಜಗದೀಶ್ ಕಾರಂತ್ ನಾಲಿಗೆ ಹರಿಬಿಟ್ಟಿದ್ದರು. ಈ ಜಗದೀಶ್ ಕಾರಂತ್ ಹಿಂದೂ ಜಾಗರಣ ವೇದಿಕೆ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ. ಇದೀಗ ಜಗದೀಶ್ ಕಾರಂತ್ ವಿರುದ್ದ ದೂರು ದಾಖಲಾಗಿದೆ.
ಕೊರಳ ಪಟ್ಟಿ ಹಿಡಿಯುತ್ತೇನೆ ಎಂದಿದ್ದ ಜಗದೀಶ್ ವಿರುದ್ಧ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಏಕವಚನ ಹಾಗೂ ಅಸಭ್ಯ ಮಾತುಗಳಲ್ಲಿ ಜಿಲ್ಲಾಧಿಕಾರಿ ಹುದ್ದೆಗೆ ಅಗೌರವ ನೀಡಿದ್ದಾರೆ. ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಡ್ಡುವ ರೀತಿಯ ಪ್ರಚೋದನೆ ಮಾತುಗಳನ್ನಾಡಿದ್ದಾರೆ ಎಂದು IPC 153, 117, 504, 506,189ರಡಿ ಪ್ರಕರಣ ದಾಖಲಾಗಿದೆ.
ಕಾರಿಂಜ ದೇವಳದ ಸುತ್ತ ಗಣಿಗಾರಿಕೆ ನಡೆಯುತ್ತಿದೆ. ಈ ಗಣಿಗಾರಿಕೆಯನ್ನು ಡಿಸೆಂಬರ್ 21ರ ಒಳಗೆ ನಿಲ್ಲಿಸುವಂತೆ ಆಗ್ರಹಿಸಿ ಸಭೆ ನಡೆಸಲಾಗಿತ್ತು. ನಿಲ್ಲಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಬೆದರಿಕೆ ಹಾಕಿದ್ದರು. ಗಣಿಗಾರಿಕೆ ನಿಲ್ಲಿಸುವ ತಾಕತ್ತಿಲ್ಲದಿದ್ದರೆ ಟ್ರಾನ್ಸ್ ಫರ್ ತೆಗೆದುಕೊಂಡು ಹೋಗು ಎಂದು ಜಗದೀಶ್ ಕಾರಂತ್ ಏಕವಚನದಲ್ಲೇ ನಿಂದಿಸಿದ್ದರು. ಇದೀಗ ಆ ವಿಚಾರಕ್ಕೆ ಜಿಲ್ಲಾಧಿಕಾರಿ ದೂರು ನೀಡಿದ್ದಾರೆ.