ವರದಿ ಮತ್ತು ಫೋಟೋ ಕೃಪೆ,
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಹೊಳಲ್ಕೆರೆ, ಅಕ್ಟೋಬರ್. 05 : ಎಂತಹ ಸಂದರ್ಭವೇ ಎದುರಾದರೂ ತಾಳ್ಮೆ, ಸಂಯಮ ಕಳೆದುಕೊಳ್ಳಬೇಡಿ. ಯಾರೆ ಆಸ್ಪತ್ರೆಗೆ ಬರಲಿ ತಾರತಮ್ಯವಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸಿ ರೋಗಿಗಳ ಪ್ರಾಣ ಉಳಿಸಿ ಎಂದು ಶಾಸಕ ಡಾ.ಎಂ.ಚಂದ್ರಪ್ಪ ವೈದ್ಯರುಗಳಿಗೆ ಕರೆ ನೀಡಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ನಡೆದ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೈದ್ಯರುಗಳನ್ನು ದೈವ ಸ್ವರೂಪಿಯಾಗಿ ಕಾಣಲಾಗುತ್ತಿದೆ. ನಲವತ್ತು ವರ್ಷಗಳಿಂದಲೂ ನನಗೆ ಜ್ವರ, ಕೆಮ್ಮ, ನೆಗಡಿ ಬಂದಿರುವುದು ಗೊತ್ತಿಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಸಾರ್ವಜನಿಕರ ಸೇವೆ ಮಾಡಬೇಕೆಂಬ ಉದ್ದೇಶದಿಂದ ನನ್ನ ರಾಜಕೀಯ ಜೀವನದಲ್ಲಿ ಅತ್ಯುತ್ತಮವಾದ ಶಾಲಾ-ಕಾಲೇಜು, ಹೈಟೆಕ್ ಆಸ್ಪತ್ರೆ, ಸ್ಟೇಡಿಯಂ, ಒಳಾಂಗಣ ಕ್ರೀಡಾಂಗಣ, ಈಜುಕೊಳ ನಿರ್ಮಿಸಿದ್ದೇನೆ. ಮುಂದಿನ ಪೀಳಿಗೆಯ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಇದಕ್ಕೆ ಕ್ಷೇತ್ರದ ಜನ ಸಹಕಾರ ನೀಡುತ್ತಿದ್ದಾರೆಂದು ಸ್ಮರಿಸಿದರು.
ತಾಯಿ-ಮಕ್ಕಳ ಆಸ್ಪತ್ರೆ ತುಂಬಾ ಮುಖ್ಯ. ಹೆಚ್.ಡಿ.ಪುರದಲ್ಲಿ ಹನ್ನೆರಡು ಕೋಟಿ ರೂ.ವೆಚ್ಚದಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಿಸಿದ್ದೇನೆ. ಚಿಕ್ಕಜಾಜೂರಿನಲ್ಲಿ ಹದಿನೈದು ಕೋಟಿಯಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗಿದೆ. ವಸತಿ ಗೃಹಗಳಿಗೆ ಎರಡೆರಡು ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದೇನೆ. ತಾಲ್ಲೂಕಿನಾದ್ಯಂತ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಲಕ್ಷಾಂತರ ರೂ.ಗಳನ್ನು ನೀಡಿ ಶಿಕ್ಷಣ, ಆರೋಗ್ಯ, ರಸ್ತೆಗೆ ಮಹತ್ವ ಕೊಟ್ಟಿದ್ದೇನೆ. ಒಟ್ಟಾರೆ ಸಮಾಜಕ್ಕೆ ವೈದ್ಯರುಗಳ ಸೇವೆ ಅತ್ಯವಶ್ಯಕ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ತಾಲ್ಲೂಕು ಆರೋಗ್ಯಾಧಿಕಾರಿ ಶ್ರೀಮತಿ ರೇಖಾ, ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ರೇಣುಕಾ
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ವಿನಯ್ ಸಿ.ಸಜ್ಜನ್, ನಾಮ ನಿರ್ದೇಶಿತ ಸದಸ್ಯರುಗಳು, ವೈದ್ಯಾಧಿಕಾರಿಗಳು ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಯಲ್ಲಿ ಹಾಜರಿದ್ದರು.