ಬೆಂಗಳೂರು : ಕನ್ನಡ ಇಂಡಸ್ಟ್ರಿಯನ್ನ ಟಾಪ್ ಲೆವೆಲ್ ಗೆ ತೆಗೆದುಕೊಂಡು ಹೋದ ಕೆಜಿಎಫ್ ಸಿನಿಮಾವನ್ನ ಯಾರಾದರೂ ಮರೆಯೋದಕ್ಕೆ ಸಾಧ್ಯನಾ. ಸಿನಿಮಾ ಅಷ್ಟೇ ಅಲ್ಲ ಅದರೊಳಗಿನ ಒಂದೊಂದು ಪಾತ್ರವೂ ನೆನಪಿನಾಳದಲ್ಲಿ ಅಚ್ಚೊತ್ತಿದೆ. ಆದ್ರೆ ಈಗ್ಯಾಕೆ ಆ ಮಾತು ಅಂದ್ಕೊಳ್ತಾ ಇದ್ದೀರಾ. ವಿಷ್ಯ ಇಲ್ಲೆ ಇರೋದು. ಆ ಸಿನಿಮಾದಲ್ಲಿ ಖಡಕ್ ವಿಲನ್ ಆಗಿ ಮಿಂಚಿದ್ದ ದಯಾ ಅನ್ನೋ ಕ್ಯಾರೆಕ್ಟರ್ ನೆನಪಿರಬಹುದು. ಎಸ್, ಅದೇ ದಯಾ ಉರುಫ್ ತಾರಕ್ ಪೊನ್ನಪ್ಪ ಇದೀಗ ಹೀರೋ ಆಗಿ ಎಂಟ್ರಿ ಕೊಡ್ತಾ ಇದ್ದಾರೆ.
ಅಮೃತ ಅಪಾರ್ಟ್ ಮೆಂಟ್ ಸಿನಿಮಾ ಎಲ್ಲರ ಗಮನಕ್ಕೆ ಬಂದಿರುತ್ತೆ. ಯಾಕಂದ್ರೆ ಬೆಂಗಳೂರನ್ನ ಉಸಿರು ಎಂದುಕೊಂಡವರು ಒಮ್ಮೆಯಾದ್ರೂ ಸಿನಿಮಾದ ಟೀಸರ್, ಟ್ರೇಲರ್ ನೋಡಿರ್ತೀರಾ, ಒಮ್ಮೆಯಾದ್ರೂ ಗೀಯಾ ಗೀಯಾ ಹಾಡನ್ನು ಕೇಳಿರ್ತೀರಾ. ಬದುಕು ಕಟ್ಟಿಕೊಟ್ಟಿದ್ದು ಇದೇ ಬೆಂಗಳೂರಲ್ವೆ. ಆ ಸಿನಿಮಾದ ಪ್ರತಿಯೊಂದು ಭಾಗವೂ ಮನಸ್ಸಿನಾಳಕ್ಕೆ ಟಚ್ ಆಗಲೇ ಬೇಕಲ್ವೆ. ಆ ಪ್ರಯತ್ನ ಮಾಡಿದ್ದು ನಿರ್ದೇಶಕ ಗುರುರಾಜ ಕುಲಕರ್ಣಿ.
ಧಾರಾವಾಹಿಗಳಲ್ಲಿ ನಟಿಸಿ, ಕೆಜಿಎಫ್ ಹಾಗೂ ಯುವರತ್ನ ಸಿನಿಮಾಗಳಲ್ಲಿ ಬಿಗ್ ಸ್ಟಾರ್ ಗಳ ಜೊತೆ ವಿಲನ್ ಆಗಿ ನಟಿಸಿದ್ದ ತಾರಕ್ ಪೊನ್ನಪ್ಪ ಮೊದಲ ಬಾರಿಗೆ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಥೆ ಕೇಳಿ ಎಕ್ಸೈಟ್ ಆಗಿರೋ ತಾರಕ್ ಪೊನ್ನಪ್ಪ ಜನ ನನ್ನ ಖಳನಟನಾಗಿ ನೋಡಿದ್ರು, ಈಗ ಹೀರೋ ಆಗಿ ಯಾವ ರೀತಿ ಸ್ವೀಕರಿಸ್ತಾರೆ ಅನ್ನೋ ಚಾಲೆಂಜ್ ನನ್ನ ಮುಂದಿದೆ. ಆದ್ರೆ ಕಂಟೆಂಟ್ ಮೇಲಿನ ಭರವಸೆ ಗೆದ್ದೆ ಗೆಲ್ಲಿಸುತ್ತೆ ಅಂತಿದ್ದಾರೆ.
ಟೀಸರ್, ಟ್ರೇಲರ್ ನೋಡಿದವರಿಗೆ ಸ್ವಲ್ಪ ಮನಸ್ಸು ನಡುಗಿರಬಹುದು. ಆದ್ರೆ ನಿರ್ದೇಶಕರು ಕಟ್ಟಿಕೊಟ್ಟಿರುವ ರೀತಿ ಭಯದ ವಾತಾವರಣಕ್ಕಿಂತ ಹೆಚ್ಚಾಗಿ ಸಿನಿಮಾ ಮುಗಿಯುವವರೆಗೂ ಕ್ಯೂರಿಯಾಸಿಟಿಯನ್ನ ಬಿಲ್ಡ್ ಮಾಡುತ್ತಲೆ ಹೋಗುತ್ತೆ. ಮುಂದೇನಾಗಬಹುದು ಎಂಬ ಕುತೂಹಲವನ್ನ ಹೆಚ್ಚಿಸುತ್ತೆ. ಅಷ್ಟು ಕಲಾತ್ಮಕವಾಗಿ ಚಿತ್ರವನ್ನ ಕಟ್ಟಿಕೊಟ್ಟಿದ್ದಾರೆ. ಮರ್ಡರ್ ಮಿಸ್ಟ್ರಿ ಆದ್ರು ಫ್ಯಾಮಿಲಿ ಎಲ್ಲಾ ಕುಳಿತು ಸಿನಿಮಾ ನೋಡಬಹುದು ಎನ್ನುತ್ತೆ ಚಿತ್ರತಂಡ.
ಗುರುರಾಜ ಕುಲಕರ್ಣಿ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. ಅರ್ಜುನ್ ಅಜಿತ್ ಕ್ಯಾಮೆರಾ ಕೈಚಳಕ. ಕೆಂಪರಾಜ್ ಸಂಕಲನ ಮತ್ತು ಎಸ್ ಡಿ ಅರವಿಂದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಊರ್ವಶಿ ಗೋವರ್ಧನ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಾನಸ ಜೋಶಿ, ಬಾಲಾಜಿ ಮನೋಹರ್, ಸೀತಾ ಕೋಟೆ, ಮಾಲತೇಶ್, ಸಿತಾರಾ, ಜಗದೀಶ್ ಬಾಲಾ, ರಾಜು ನೀನಾಸಂ, ಅರುಣ್ ಮೂರ್ತಿ, ಶಂಕರ್ ಶೆಟ್ಟಿ ರಂಗಸ್ವಾಮಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.