ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 02 : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ “ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಂಸ್ಥೆಯ ನಿರ್ದೇಶಕರಾದ ಶ್ರೀ ಎಸ್.ಎಂ.ಪೃಥ್ವೀಶ ಅವರು ಮಾತನಾಡುತ್ತಾ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರು ದೇಶಕಂಡ ಮಹಾನ್ ನಾಯಕರುಗಳು. ಅವರ ತ್ಯಾಗ ಹಾಗೂ ಬಲಿದಾನ ಇಂದು ನಾವುಗಳು ಅನುಭವಿಸುತ್ತಿರುವ ನಿಜವಾದ ಸ್ವಾತಂತ್ರ್ಯ ಅಲ್ಲದೇ ಗಾಂಧೀಜಿಯವರ ತತ್ವ ಆದರ್ಶಗಳು ನಮಗೆ ದಾರಿ ದೀಪ. ಗಾಂಧೀಯವರ ಅಹಿಂಸಾ ಮಾರ್ಗವನ್ನೇ ಇಂದು ‘ಅಂತರ ರಾಷ್ಟ್ರೀಯ ಅಹಿಂಸಾ ದಿನ’ವಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಆದರೆ ದೇಶ ದೇಶಗಳ ಮಧ್ಯೆ ಹಿಂಸೆ ಪರಾಕಾಷ್ಠಕ್ಕೆ ಏರಿದೆ. ಅಹಿಂಸೆಯನ್ನು ಮರಳಿ ತರುವಲ್ಲಿ ಮತ್ತೊಮ್ಮೆ ನಿಮ್ಮ ಜನ್ಮ ಮರುಕಳಿಸಲಿ ಎಂದರು.
ಸಂಸ್ಥೆಯ ಐಸಿಎಸ್‍ಸಿ ಉಪ ಪ್ರಾಂಶುಪಾಲರಾದ ಶ್ರೀ ಅವಿನಾಶ್ ಬಿ. ಅವರು ಮಾತನಾಡುತ್ತಾ ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ವಿಚಾರಧಾರೆಗಳನ್ನು ನಮ್ಮ ನಿಜ ಜೀವನದಲ್ಲಿ ಅಳವಡಿಕೊಳ್ಳಬೇಕು ಮತ್ತು ಮಕ್ಕಳಿಗೂ ಅಳವಡಿಸಿಕೊಳ್ಳಲು ಪ್ರೇರೇಪಿಸಬೇಕು. ಅಷ್ಟೇ ಅಲ್ಲದೇ ಗಾಂಧೀಜಿಯವರ ಅಹಿಂಸಾ ಮಾರ್ಗವು ಇಂದಿನ ಆಧುನಿಕ ಜೀವನಕ್ಕೆ ಸೂಕ್ತ ಅನಿಸುತ್ತದೆ, ಅಷ್ಟೇ ಅಲ್ಲದೇ ಶಾಸ್ತ್ರೀಯವರ ಸರಳ ವ್ವಕ್ತಿತ್ವವು ಇಂದಿಗೂ ಜನರಿಗೆ ಸ್ಪೂರ್ತಿದಾಯಕ ಎಂದು ಹೇಳಿದರು.
ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀ.ಎನ್.ಜಿ.ತಿಪ್ಪೇಸ್ವಾಮಿ ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಪೋಷಕರ ಮಾತಿಗಿಂತ ಹೆಚ್ಚಾಗಿ ಶಿಕ್ಷಕರ ಮಾತುಗಳನ್ನು ತಪ್ಪದೇ ಪಾಲಿಸುವುದರಿಂದ ಶಿಕ್ಷಕರು ಮಕ್ಕಳಿಗೆ ಗಾಂಧೀಜಿಯವರು ಪಾಲಿಸುತ್ತಿದ್ದ ಅಹಿಂಸಾ ಮಾರ್ಗ ಶಾಲೆಯಿಂದಲೇ ನಮ್ಮ ಜೀವನದಲ್ಲಿ ರೂಢಿಸಿಕೊಳ್ಳವಂತೆ ಸಲಹೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಿ.ವಿಜಯ್ ಕುಮಾರ್ ಹಾಗೂ ಸಂಸ್ಥೆಯ ಆಡಳಿತ ಮಂಡಳಿ, ಐಸಿಎಸ್‍ಇ ಪ್ರಾಂಶುಪಾಲರಾದ ಬಸವರಾಜಯ್ಯ.ಪಿ ಶಿಕ್ಷಕರು/ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಸಂಸ್ಥೆಯ ಸಂಗೀತ ಶಿಕ್ಷಕಿಯಾದ ಶ್ರೀಮತಿ ಜ್ಯೋತಿ ಹೆಚ್.ಪಿ ಅವರು ದೇಶ ಭಕ್ತಿ ಗೀತೆಯನ್ನು ಹಾಡಿದರು.
ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ರೀಮತಿ ಅಕ್ಷತಾ ಅವರು ನಿರೂಪಿಸಿದರು, ಶ್ರೀಮತಿ ಶಾರದ ಅವರು ಸ್ವಾಗತಿಸಿದರು, ಶ್ರೀಮತಿ ದಿವ್ಯಾ ಅವರು ವಂದಿಸಿದರು.