ಚಿತ್ರದುರ್ಗ, (ನವೆಂಬರ್.23) : ಜಿಲ್ಲೆಯ ವಿವಿಧ ಘಟಕಗಳಲ್ಲಿ 75 ಗೃಹರಕ್ಷಕ ಸದಸ್ಯರ ಖಾಲಿ ಸ್ಥಾನಗಳು ಇದ್ದು, ಖಾಲಿ ಇರುವ ಗೃಹರಕ್ಷಕರ ಗೌರವ ಸದಸ್ಯ ಸ್ಥಾನಗಳಿಗೆ ಅರ್ಹರಿರುವ ಹಾಗೂ ಸ್ವಯಂ ಸೇವಕ ಗೃಹರಕ್ಷಕ ಸದಸ್ಯರಾಗಲು ಇಚ್ಛೆ ಇರುವ ಸೇವಾ ಮನೋಭಾವವುಳ್ಳ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಡಿಸೆಂಬರ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ಸಮಾದೇಷ್ಟರು, ಗೃಹರಕ್ಷಕದಳ ಕಚೇರಿ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇಲ್ಲಿಗೆ ನಿಗಧಿತ ಅವಧಿಯೊಳಗೆ ಸಲ್ಲಿಸಲು ಸೂಚಿಸಿದೆ. ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಖಾಲಿ ಇರುವ ಸ್ವಯಂ ಸೇವಕ ಗೃಹರಕ್ಷಕ ಸದಸ್ಯತ್ವ ಸ್ಥಾನಗಳ ವಿವರ ಇಂತಿದೆ. ಹೊಸದಾಗಿ ಪ್ರಾರಂಭವಾಗಿರುವ ಹೊಳಲ್ಕೆರೆ ತಾಲ್ಲೂಕು ಚಿತ್ರಹಳ್ಳಿ ಉಪಘಟಕದಲ್ಲಿ 32 ಖಾಲಿ ಸ್ಥಾನಗಳು, ಮೊಳಕಾಲ್ಮುರು ತಾಲ್ಲೂಕು ರಾಂಪುರ ಉಪಘಟಕದಲ್ಲಿ 09 ಖಾಲಿ ಸ್ಥಾನಗಳು, ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಉಪಘಟಕದಲ್ಲಿ 10 ಖಾಲಿ ಸ್ಥಾನಗಳು, ಚಿತ್ರದುರ್ಗ ತಾಲ್ಲೂಕು ಭರಮಸಾಗರ ಉಪಘಟಕದಲ್ಲಿ 14 ಖಾಲಿ ಸ್ಥಾನಗಳು ಹಾಗೂ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಉಪಘಟಕದಲ್ಲಿ 10 ಖಾಲಿ ಸ್ಥಾನಗಳು ಸೇರಿದಂತೆ ಒಟ್ಟು 75 ಖಾಲಿ ಸ್ಥಾನಗಳು ಇವೆ.
ಅರ್ಹತೆಗಳು : ವಯಸ್ಸು ಕನಿಷ್ಟ 19 ರಿಂದ 45 ವರ್ಷ ಒಳಗಿನವರಿರಬೇಕು. ವಿದ್ಯಾರ್ಹತೆ 10ನೇ ತರಗತಿ ಉತ್ತೀರ್ಣರಾಗಿರಬೇಕು. ಗೃಹರಕ್ಷಕ ಸದಸ್ಯತ್ವಕ್ಕೆ ಸೇರಬಯಸುವ ಅಭ್ಯರ್ಥಿಗಳು ಗರಿಷ್ಟ 5 ಕಿ.ಮೀ ಒಳಗಿನವರಾಗಿರಬೇಕು. ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರಬಾರದು. ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರಬಾರದು. ಉತ್ತಮ ದೇಹದಾಡ್ರ್ಯತೆಯನ್ನು ಹೊಂದಿರಬೇಕು. ಪುರುಷರಿಗೆ ಎತ್ತರ 168 ಸೆಂ.ಮೀ ತೂಕ 50 ಕೆ.ಜಿ ಇರಬೇಕು. ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ. ಸ್ವಯಂ ಸೇವಾ ಮನೋಭಾವದಲ್ಲಿ ಆಸಕ್ತಿ ಇರುವಂತಹ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ.
ಜಿಲ್ಲಾ ಗೃಹರಕ್ಷಕದಳ ಕಚೇರಿ, ಮೆದೇಹಳ್ಳಿ ರಸ್ತೆ, ಚಿತ್ರದುರ್ಗ ಇಲ್ಲಿ ಅರ್ಜಿಗಳು ದೊರೆಯಲಿದ್ದು, ನವೆಂಬರ್ 25 ರಿಂದ ಡಿಸೆಂಬರ್ 6 ರವರೆಗೆ ಅರ್ಜಿಗಳನ್ನು ವಿತರಿಸಲಾಗುವುದು. ಡಿಸೆಂಬರ್ 10, ಸಂಜೆ 5.30 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08194-231403, ಬೋಧಕರು-94810 47857, ಸಹಾಯಕ ಬೋಧಕರು 9481501233 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಗೃಹರಕ್ಷಕದಳ ಸಮಾದೇಷ್ಟರು ತಿಳಿಸಿದ್ದಾರೆ.