ಶಿವಮೊಗ್ಗ: ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಕೆಲವು ದಿನಗಳ ಹಿಂದಷ್ಟೇ ಕೆ ಎಸ್ ಈಶ್ವರಪ್ಪ ಅವರು ಚಂದ್ರಶೇಖರ್ ಕುಟುಂಬಸ್ಥರನ್ನು ಭೇಟಿಯಾಗಿ ಬಂದಿದ್ದರು. ಆ ವೇಳೆ ಹಣದ ಸಹಾಯವನ್ನು ಮಾಡಿದ್ದರು. ನಮ್ಮ ನೆರವು ನಾವೂ ನೀಡಿದ್ದೇವೆ. ಇನ್ನೇನಿದ್ದರು ಸರ್ಕಾರ ಅದರ ನೆರವು ನೀಡಬೇಕು ಎಂದು ಹೇಳಿದ್ದರು. ಇದೀಗ ರಾಜ್ಯ ಸರ್ಕಾರದ ನಡೆಯನ್ನು ಮೆಚ್ಚಿಕೊಂಡಿದ್ದಾರೆ.
ಚಂದ್ರಶೇಖರ್ ಆತ್ಮಹತ್ಯೆಯ ಬಳಿಕ ಸರ್ಕಾರದಿಂದ 25 ಲಕ್ಷ ಪರಿಹಾರ ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದ್ದರು. ಇದೀಗ ಆ ಪರಿಹಾರದ ಚೆಕ್ ಪಡೆಯಲು ನಾಳೆ ಬೆಂಗಳೂರಿಗೆ ಬರುವಂತೆ ಅವರ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಈ ವಿಚಾರಕ್ಕೆ ಈಶ್ವರಪ್ಪ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಚಂದ್ರಶೇಖರ್ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡ್ತೀವಿ ಅಂತ ಸಿಎಂ ಹೇಳಿದ್ರು. ನಾವೂ ಕೊಡಲೇಬೇಕೆಂದು ಒತ್ತಾಯ ಹಾಕ್ತಿದ್ವಿ. ಇದೀಗ ನಿಗಮದ ಎಂಡಿ ಚೆಕ್ ತೆಗೆದುಕೊಳ್ಳುವುದಕ್ಕೆ ನಾಳೆ ಬೆಂಗಳೂರಿಗೆ ಬರಲು ಹೇಳಿದ್ದಾರೆ. 25 ಲಕ್ಷದ ಚೆಕ್ ಪಡೆಯಲು ನಾಳೆ ಬೆಂಗಳೂರಿಗೆ ಬರಲು ಹೇಳಿದ್ದಾರೆ. ಅಟ್ರಾಸಿಟಿ ಕೇಸ್ ದಾಖಲಾಗಿರುವ ಹಿನ್ನೆಲೆ 8 ಲಕ್ಷದ 25 ಸಾವಿರ ರೂಪಾಯಿ ಕವಿತಾ ಅವರ ಅಕೌಂಟಿಗೆ ಬಂದಿದೆ. ಕೆಲಸ ಕೊಡುವ ವಿಚಾರದಲ್ಲಿ ಎಂಡಿ ಅವರಿಗೆ ನಾನು ಕಾಲ್ ಮಾಡಿದ್ದೆ. ಚಂದ್ರಶೇಖರ್ ಮಗನಿಗೆ ಹೊಟೇಲ್ ಮ್ಯಾನೇಜ್ಮೆಂಟ್ ನಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಹೇಳಿದ್ದಾರೆ. ಅವರಿಗೆ ಬರುವಂತಹ ಪೆನ್ಶನ್ ಕೊಡುವುದಕ್ಕೆ ಡಿಸಿ ಅವರು ಕವಿತಾ ಅವರನ್ನು ಬರುವುದಕ್ಕೆ ಹೇಳಿದ್ದಾರೆ. ನಮ್ಮ ಕಾರ್ಯಕರ್ತರ ಪ್ರಯತ್ನದಿಂದ ಪರಿಹಾರ ಸಿಕ್ಕಿದೆ ಎಂದಿದ್ದಾರೆ.