ತುಮಕೂರು ವಿವಿ ಆಡಳಿತ ಮಂಡಳಿ ವಿರುದ್ಧ ವಿಜಯೇಂದ್ರ ಅವರು ಗುಡುಗಿದ್ಯಾಕೆ..?

suddionenews
2 Min Read

ಶಿವಮೊಗ್ಗ: ಹಿಂದೆಂದೂ ಘಟಿಸದ ರೀತಿಯಲ್ಲಿ ರಾಜ್ಯದಲ್ಲಿ ಗಣೇಶ ಉತ್ಸವದ ಮೆರವಣಿಗೆಗಳ ಮೇಲೆ ವ್ಯವಸ್ಥಿತವಾಗಿ ದಾಳಿನಡೆಯುತ್ತಿದೆ, ಹಿಂದೂ ವಿರೋಧಿ ಶಕ್ತಿಗಳು ಸಮಾಜದ ಶಾಂತಿ ಸುವ್ಯವಸ್ಥೆಗೆ ಭಂಗ ತಂದು ಅಶಾಂತಿಯ ವಾತಾವರಣ ಸೃಷ್ಟಿಸಲು ವ್ಯವಸ್ಥಿತವಾಗಿ ತೊಡಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ‌ ವಿರುದ್ಧ ಹರಿಹಾಯ್ದಿದ್ದಾರೆ.

ಸರಣಿ ಘಟನೆಗಳನ್ನು ಗಮನಿಸಿದರೆ ಹಿಂದೂ ಧಾರ್ಮಿಕ ಆಚಾರ-ವಿಚಾರಗಳನ್ನು ದಮನ ಮಾಡಲು ಒಂದು ವ್ಯವಸ್ಥಿತ ಷಡ್ಯಂತ್ರ ಈ ರಾಜ್ಯದಲ್ಲಿ ನಡೆಯುತ್ತಿರುವಂತೆ ಕಾಣುತ್ತಿದೆ. ಕಣ್ಣು, ಕಿವಿ ಇವೆರಡನ್ನು ಮುಚ್ಚಿಕೊಂಡಿರುವ ಕಾಂಗ್ರೆಸ್ ಸರ್ಕಾರದ ಕಾನೂನು ಸುವ್ಯವಸ್ಥೆ ತಿಳಿಗೇಡಿಗಳ ವ್ಯೂಹವನ್ನು ಭೇದಿಸಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸುವ ನಿಟ್ಟಿನಲ್ಲಿ ಗಮನ ನೀಡುವ ಬದಲು ಧಾರ್ಮಿಕ ಶ್ರದ್ಧೆಯ ಗಣೇಶೋತ್ಸವದ ಮೆರವಣಿಗೆಗಳನ್ನು ಹತ್ತಿಕ್ಕಲು ನಾಚಿಕೆಗೇಡಿನ ಕ್ರಮವಾಗಿದೆ.

ಎಷ್ಟರಮಟ್ಟಿಗೆ ಪೊಲೀಸ್ ವ್ಯವಸ್ಥೆ ಪಕ್ಷಪಾತಿ ಹಾಗೂ ನಿಷ್ಕ್ರಿಯವಾಗಿದೆ ಎಂದರೆ, ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರು ತುಮಕೂರಿನ ಗಣೇಶೋತ್ಸವದ ಮೆರವಣಿಗೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸದಂತೆ ನಿರ್ಬಂಧಿಸುವ ಹೇಡಿತನವನ್ನು ಪ್ರದರ್ಶಿಸಿದ್ದಾರೆ. ವಿದ್ಯೆಗೆ ಅಧಿಪತಿ ಗಣಪತಿ, ವಿದ್ಯೆ ದಯಪಾಲಿಸುವ ಗಣೇಶನನ್ನು ಶಾಲಾ-ಕಾಲೇಜುಗಳಲ್ಲಿ ಪೂಜಿಸುವುದು, ಮೆರವಣಿಗೆ ನಡೆಸುವುದು ಶತಮಾನಗಳಿಂದ ನಡೆದು ಬಂದಿರುವ ಪ್ರತೀತಿ. ವಿದ್ಯಾರ್ಥಿಗಳ ಧಾರ್ಮಿಕ ನಂಬಿಕೆ ಶೈಕ್ಷಣಿಕ ಶ್ರದ್ಧೆಯನ್ನು ವಿಚಲಿತಗೊಳಿಸಲು ಯತ್ನಿಸುವ ಕ್ರಮ ಇದಾಗಿದೆ.

ಒಂದು ಕಡೆ ಧಾರ್ಮಿಕ ಆಚರಣೆಯಲ್ಲಿ ತೊಡಗುವವರಿಗೆ ರಕ್ಷಣೆ ನೀಡಲಾಗದೆ, ಮತ್ತೊಂದು ಕಡೆ ಹಿಂದೂ ವಿರೋಧಿ ದುಷ್ಕರ್ಮಿಗಳ ಷಡ್ಯಂತ್ರವನ್ನು ಪರೋಕ್ಷವಾಗಿ ಬೆಂಬಲಿಸುವಂತೆ ಪೊಲೀಸ್ ವ್ಯವಸ್ಥೆ ನಡೆದುಕೊಳ್ಳುತ್ತಿದೆ. ಈ ನಡವಳಿಕೆಯನ್ನು ನಾವು ಸಹಿಸಿಕೊಳ್ಳುತ್ತಿದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯವಲ್ಲ ಎಂಬ ಅಂಶ ಸರ್ಕಾರದ ವ್ಯವಸ್ಥೆಗೆ ತಿಳಿದಿರಲಿ. ತಾಳ್ಮೆ, ಸಂಯಮ ನಮ್ಮ ಸಂಸ್ಕಾರ ಹೌದು, ಅಂತೆಯೇ ದಬ್ಬಾಳಿಕೆಯನ್ನು ಹೆಮ್ಮೆಟ್ಟಿಸುವುದು ನಮ್ಮ ಸ್ವಾಭಿಮಾನದ ಸಂಕೇತವೂ ಎಂಬುದು ಈ ಸರ್ಕಾರಕ್ಕೆ ತಿಳಿದಿರಲಿ.

ಮುಗ್ಧ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಪರೋಕ್ಷವಾಗಿ ದ್ವೇಷದ ಭಾವನೆ ಬಿತ್ತುವ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರು ಹೊರಡಿಸಿರುವ ಸುತ್ತೋಲೆ ಶಾಂತಿ ಮೂಡಿಸುವ ಬದಲಾಗಿ ವಿದ್ಯಾರ್ಥಿಗಳ ಸಂಯಮಕ್ಕೆ ಭಂಗ ತರುತ್ತದೆ, ಅಸಹನೆಯನ್ನು ಹುಟ್ಟು ಹಾಕುತ್ತದೆ ಎಂಬ ವಿವೇಚನೆ ವಿ.ವಿ. ಆಡಳಿತ ಬಳಸದಿರುವುದು ವಿಪರ್ಯಾಸವೆನಿಸಿದೆ. ಈ ಕೂಡಲೇ ವಿಶ್ವವಿದ್ಯಾನಿಲಯವು ಸುತ್ತೋಲೆಯನ್ನು ವಾಪಾಸ್ ತೆಗೆದುಕೊಳ್ಳಲಿ. ಸ್ವ ಇಚ್ಛೆಯಿಂದ ಹಾಗೂ ಧಾರ್ಮಿಕ ಶ್ರದ್ಧೆಯಿಂದ ವಿದ್ಯಾರ್ಥಿಗಳು ಉತ್ಸವದಲ್ಲಿ ಭಾಗವಹಿಸುವುದನ್ನು ತಡೆಯುವ ಪ್ರಯತ್ನವನ್ನು ಈ ಕೂಡಲೇ ನಿಲ್ಲಿಸಲಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *