ನಟ ದರ್ಶನ್ ಜೈಲಿಗೆ ಸೇರಿ ನೂರು ದಿನಗಳಾಗಿವೆ. ಕೊಲೆ ಕೇಸಲ್ಲಿ ಸಿಕ್ಕಿ ಬಿದ್ದ ಮೇಲೆ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಹಾಕಿದ್ದರು. ಮನೆಯವರು, ಸ್ನೇಹಿತರು ಭೇಟಿ ನೀಡಿ, ಸಮಾಧಾನ, ಧೈರ್ಯ ಹೇಳಲು ಸುಲಭವಾಗಿತ್ತು. ಆದರೆ ರೌಡಿಶೀಟರ್ ಗಳ ಜೊತೆಗೆ ಕಾಣಿಸಿಕೊಂಡ ಮೇಲೆ ಅಲ್ಲಿಂದ ಬಳ್ಳಾರಿ ಜೈಲಿಗೆ ಬಂದರು. ಇಲ್ಲಿ ಪರಿಚಯದವರು ಇಲ್ಲ, ಬೇಕಾದದ್ದು ಇಲ್ಲ. ದರ್ಶನ್ ಕೊಂಚ ಕುಗ್ಗಿ ಹೋಗಿದ್ದಾರೆ.
ಈಗಾಗಲೇ ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿದೆ. ಆದರೂ ಜಾಮೀನಿಗ್ಯಾಕೆ ಅರ್ಜಿ ಹಾಕಿಲ್ಲ ಎಂಬುದೇ ದರ್ಶನ್ ಗೆ ಇರುವ ಟೆನ್ಶನ್. ಒಂದೆರಡು ಸಲ ದರ್ಶನ್ ಅವರೇ ಹೆಂಡತಿಯನ್ನು ಜೈಲಿಗೆ ಕರೆಸಿಕೊಂಡಿದ್ದಾರೆ. ಜಾಮೀನಿನ ಬಗ್ಗೆಯೇ ಚರ್ಚೆ ಮಾಡಿದ್ದಾರೆ. ನಿನ್ನೆ ಕೂಡ ದರ್ಶನ್ ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಬಂದು, ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ದರ್ಶನ್ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ. ಜಾಮೀನು ಸಲ್ಲಿಕೆಗೆ ತಡವಾಗುತ್ತಿರುವುದೇಕೆ ಎಂಬುದನ್ನು ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಇನ್ನು ದರ್ಶನ್ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 30ರ ತನಕ ವಿಸ್ತರಣೆ ಮಾಡಲಾಗಿದೆ.
ದರ್ಶನ್ ಭೇಟಿಯಾದ ಮೇಲೆ ವಿಜಯಲಕ್ಷ್ಮೀ ಮತ್ತಷ್ಟು ಧೈರ್ಯ ತುಂಬಿ ಬಂದಿದ್ದಾರೆ. ನಿಮ್ಮ ವಿರುದ್ಧ ಸ್ಟ್ರಾಂಗ್ ಎವಿಡೆನ್ಸ್ ಸಿಕ್ಕಿದೆ. ಆದರೂ ನಮ್ಮ ಪರ ವಕೀಲರು ಸ್ಟ್ರಾಂಗ್ ಆಗಿ ವಾದ ಮಾಡುತ್ತಾರೆ. ಇನ್ನೆರಡು ದಿನದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡುತ್ತೇವೆ. ಧೈರ್ಯದಿಂದ ಇರಿ ಎಂದು ದರ್ಶನ್ ಅವರಿಗೆ ಭರವಸೆ ನೀಡಿ ಬಂದಿದ್ದಾರೆ ಎನ್ನಲಾಗಿದೆ. ವಿಜಯಲಕ್ಷ್ಮೀ ಜೊತೆಗೆ ನಟ ಧನ್ವೀರ್ ಕೂಡ ಭೇಟಿಗೆ ಹೋಗಿದ್ದರು. ಈ ಮೂಲಕ ಇನ್ನೆರಡು ದಿನದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ ಇದೆ.