ಸುದ್ದಿಒನ್, ನವದೆಹಲಿ, ಸೆಪ್ಟೆಂಬರ್. 15 : ದೆಹಲಿ ಸಿಎಂ ಕೇಜ್ರಿವಾಲ್ ಸಂಚಲನ ಮೂಡಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೇಜ್ರಿವಾಲ್ ಘೋಷಿಸಿದ್ದಾರೆ. ಮತ್ತೊಮ್ಮೆ ಜನರ ಬಳಿಗೆ ಹೋಗುತ್ತೇನೆ ಎಂದಿದ್ದಾರೆ. ನನ್ನ ಭವಿಷ್ಯವನ್ನು ಜನರೇ ನಿರ್ಧರಿಸುತ್ತಾರೆ. ನಾನು ಭ್ರಷ್ಟನಲ್ಲ ಎಂಬ ಭಾವನೆ ಇದ್ದರೆ ಮಾತ್ರ ಮತ ನೀಡಿ ಎಂದು ಕರೆ ನೀಡಿದರು. ಮತ್ತೆ ಗೆದ್ದರೆ ಮಾತ್ರ ಸಿಎಂ ಸ್ಥಾನಕ್ಕೇರುತ್ತೇನೆ ಎಂದು ಕೇಜ್ರಿವಾಲ್ ಘೋಷಿಸಿದರು. ಎಎಪಿ ಸಂಕಷ್ಟದಲ್ಲಿದ್ದಾಗ ದೇವರು ಜೊತೆಗಿದ್ದು ಮುಂದೆ ಮಾರ್ಗದರ್ಶನ ನೀಡಿದ್ದಾನೆ ಎಂದು ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ. ಎಎಪಿ ನಾಯಕರಾದ ಸತ್ಯೇಂದರ್ ಜೈನ್ ಮತ್ತು ಅಮಾನತುಲ್ಲಾ ಖಾನ್ ಇನ್ನೂ ಜೈಲಿನಲ್ಲಿದ್ದಾರೆ. ದೇವರು ಕೊಟ್ಟ ಧೈರ್ಯದಿಂದ ಶತ್ರುಗಳ ವಿರುದ್ಧ ಹೋರಾಡುತ್ತೇವೆ ಎಂದಿದ್ದಾರೆ.
ದೆಹಲಿಯ ಮದ್ಯ ನೀತಿಗೆ ಸಂಬಂಧಿಸಿದ ಸಿಬಿಐ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಸುಮಾರು ಆರು ತಿಂಗಳ ನಂತರ ತಿಹಾರ್ ಜೈಲಿನಿಂದ ಬಿಡುಗಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಜ್ರಿವಾಲ್, ಷಡ್ಯಂತ್ರದ ಮೇಲೆ ಸತ್ಯ ಗೆದ್ದಿದೆ. ದೇಶವನ್ನು ಒಡೆಯುವ ಶಕ್ತಿಗಳ ವಿರುದ್ಧ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.