ಚಿತ್ರದುರ್ಗ. ಸೆ.13: ಮಕ್ಕಳಲ್ಲಿ ಅಪೌಷ್ಠಿಕತೆ ಮತ್ತು ರಕ್ತಹೀನತೆ ಗುರುತಿಸಿ ಮಕ್ಕಳನ್ನು ಸುಧಾರಿತ ಪೌಷ್ಟಿಕತೆಯಲ್ಲಿ ತೊಡಗಿಸಬೇಕು ಎಂದು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಸಲಹೆ ನೀಡಿದರು.
ನಗರದ ಜಿಲ್ಲಾ ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಹಿರಿಯೂರು, ಹೊಸದುರ್ಗ ಮತ್ತು ಹೊಳಲ್ಕೆರೆ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳಿಗೆ ಮಕ್ಕಳ ಸುಧಾರಿತ ಪೌಷ್ಟಿಕತೆಗಾಗಿ ಆರೋಗ್ಯ ಪ್ರಕ್ರಿಯೆ ಸಾಮಾರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಪೌಷ್ಠಿಕತೆಯ ಮಕ್ಕಳ ಪ್ರಮಾಣ ತಗ್ಗಿಸಲು ಈ ತರಬೇತಿ ಕಾರ್ಯಾಗಾರ ಒಂದು ನೂತನ ವಿಧಾನವಾಗಿದೆ. ಪ್ರತಿ ಗ್ರಾಮಗಳಲ್ಲಿ ಮಕ್ಕಳಲ್ಲಿ ಕಂಡು ಬರುವ ಅಪೌಷ್ಟಿಕತೆಯನ್ನು ಗುರಿತಿಸಿ ಆ ಮಕ್ಕಳಿಗೆ ಸ್ಥಳೀಯವಾಗಿ ದೊರೆಯುವ ಸುಧಾರಿತ ಪೌಷ್ಠಿಕಾಹಾರ ಸೇವನೆಗೆ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ತಾಯಂದಿರಿಗೆ ಸಲಹೆ ಮಾಹಿತಿ ಅರಿವು ಮೂಡಿಸಿ ಸುಧಾರಿತ ಪೌಷ್ಠಿಕ ಪೋಷಣೆಯಲ್ಲಿ ತೊಡುಗುವಂತೆ ಮಾಡುವುದು ತರಬೇತಿಯ ಮುಖ್ಯ ಉದ್ದೇಶ ಎಂದರು.
6 ವರ್ಷದೊಳಗಿನ ಮಕ್ಕಳಿಗೆ ಸಾಂಸ್ಥಿಕ ಹಾಗೂ ಸಮುದಾಯ ಮಟ್ಟದಲ್ಲಿ ಅಪೌಷ್ಠಿಕ ನಿವಾರಣೆಗಾಗಿ ಆರೈಕೆ ಮತ್ತು ಚಿಕಿತ್ಸೆ, ಪೌಷ್ಠಿಕ ಪುನ:ಶ್ಚೇತನ ಸಾರ್ವಜನಿಕ ಆರೋಗ್ಯ ಸೇವೆಗಳೊಂದಿಗೆ ಬಲಪಡಿಸಿ ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ಗ್ರಾಮಮಟ್ಟದಲ್ಲಿ ಅಪೌಷ್ಠಿಕತೆಯ ಮಕ್ಕಳನ್ನು ಗುರುತಿಸಿ ಪಟ್ಟಿ ಮಾಡಿ ಜಿಲ್ಲಾ ಆಸ್ಪತ್ರೆಯಲ್ಲಿರುವ ಪೌಷ್ಠಿಕ ಪುನ:ಶ್ಚೇತನ ಕೇಂದ್ರಕ್ಕೆ ಕಳುಹಿಸಿ ಉಚಿತ ಆರೈಕೆ ಚಿಕಿತ್ಸೆ ಪೋಷಣೆ ಪಡೆದುಕೊಳ್ಳಲು ಅರಿವು ಮೂಡಿಸಿ ಎಂದರು.
ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್, ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗೌರಮ್ಮ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಬಿ.ಜಾನಕಿ, ಲಲಿತಮ್ಮ, ಪೋಷಣ್ ಅಭಿಯಾನ ವ್ಯವಸ್ಥಾಪಕ ಕರಕಪ್ಪ ಮೇಟಿ ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು ಇದ್ದರು.