ಚಿತ್ರದುರ್ಗ. ಸೆ.05: ಶಿಕ್ಷಕರು ವೃತ್ತಿಯಲ್ಲಿ ಆದರ್ಶ, ಬದ್ಧತೆ ಹಾಗೂ ತಲ್ಲೀನತೆ ಅಳವಡಿಕೊಳ್ಳಬೇಕು ಎಂದು ಯೋಜನೆ ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಲಹೆ ನೀಡಿದರು.
ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾಪಂಚಾತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ, ಗುರುವಾರ ನಗರದ ತರಾಸು ರಂಗಮAದಿರದಲ್ಲಿ ಆಯೋಜಿಸಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕ ಸ್ಥಾನಕ್ಕೆ ಬೆಲೆ ಕಟ್ಟಲಾಗದು. ಸ್ವತಃ ನಾನು ಪದವಿ ಶಿಕ್ಷಣ ಪೂರೈಸಿದ್ದೇನೆ ಎಂದರೆ ಅದಕ್ಕೆ ಕಾರಣ ಚಿಕ್ಕಂದಿನಲ್ಲಿ ನನಗೆ ಪಾಠ ಹೇಳಿದ ಶಿಕ್ಷಕರು. ನಾನು ಜೀವನದಲ್ಲಿ ಶಿಸ್ತು, ಬದ್ಧತೆ ರೂಡಿಸಿಕೊಳ್ಳುವುದನ್ನು ಶಿಕ್ಷಕರು ಕಲಿಸಿದರು. ದೇಶ ಹಾಗೂ ರಾಜ್ಯದಲ್ಲಿ ಸರ್ಕಾರಗಳು ಸಾವಿರಾರು ಕೋಟಿ ಹಣವನ್ನು ಶಿಕ್ಷಣದ ಮೇಲೆ ಖರ್ಚು ಮಾಡುತ್ತಿವೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಶಿಕ್ಷಕರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ದಾರೆ. ರಾಜ್ಯದಲ್ಲಿ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಲಾಗಿದೆ. 2017ಕ್ಕಿಂತ ಮೊದಲು ಪ್ರಾಥಮಿಕ ಶಾಲೆಗಳಿಗೆ ನೇಮಕವಾದ ಶಿಕ್ಷಕರ ಬಡ್ತಿ ಸಮಸ್ಯೆ ಹಾಗೂ ಇತರೆ ಬೇಡಿಕೆಗಳಿಗೆ ಪರಿಹಾರ ದೊರಕಿಸಲು ಸಮಿತಿ ರಚಿಸುವ ಭರವಸೆ ನೀಡಿದ್ದಾರೆ ಎಂದು ಸಚಿವ ಡಿ.ಸುಧಾಕರ್ ಹೇಳಿದರು.