ಬೆಂಗಳೂರು: ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡರು ಎಂಬ ಗಾದೆ ಮಾತಿದೆ. ದರ್ಶನ್ ವಿಚಾರದಲ್ಲಿ ಇದು ಅಕ್ಷರಶಃ ಸತ್ಯವಾಗಿದೆ. ರೇಣುಕಾಸ್ವಾಮಿ, ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ಆತನನ್ನ ಚಿತ್ರದುರ್ಗದಿಂದ ಪಟ್ಟಣಗೆರೆ ಶೆಡ್ ವರೆಗೂ ಕರೆತಂದರು. ಅದಾದ ಮೇಲೆ ಎಚ್ಚರಿಕೆ ಕೊಟ್ಟಾದರು ಕಳುಹಿಸಿದರಾ ಇಲ್ಲ. ಆ ಕ್ಷಣಕ್ಕೆ ಕೋಪದ ಕೈಗೆ ಬುದ್ದಿ ಕೊಟ್ಟ ಇಡೀ ಗ್ಯಾಂಗ್ ರೇಣುಕಾಸ್ವಾಮಿಯನ್ನು ಹಿಂಸಿಸಿದರು. ಅದರ ಪರಿಣಾಮ ಒಣಕಲು ದೇಹದ ರೇಣುಕಾಸ್ವಾಮಿ ಸತ್ತು ಹೋದ. ಅದೇ ಕೇಸಲ್ಲಿ ಮೂರು ತಿಂಗಳಿಂದ ದರ್ಶನ್ ಅಂಡ್ ಗ್ಯಾಂಗ್ ಸೆರೆವಾಸದಲ್ಲಿದೆ. ನಿನ್ನೆಯಷ್ಟೇ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಇನ್ನಷ್ಟು ಸಂಕಷ್ಟ ಎದುರಾಗಿದೆ. ಕೊಲೆ ಮಾಡಿದ್ದರ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಪೊಲೀಸರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಪೊಲೀಸರು ಈ ಕೊಲೆ ಕೇಸಲ್ಲಿ ಸಾಕಷ್ಟು ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ಅದರಲ್ಲಿ ಶೆಡ್ ನಲ್ಲಿ ರೇಣುಕಾಸ್ವಾಮಿ ಬೇಡಿಕೊಂಡ ಫೋಟೋ ಕೂಡ. ದರ್ಶನ್ ಅಂಡ್ ಗ್ಯಾಂಗ್, ರೇಣುಕಾಸ್ವಾಮಿಯನ್ನು ರಕ್ತ ಚೆಲ್ಲುವಂತೆ ಹೊಡೆದಿದ್ದಾರೆ. ಆ ಸಮಯದಲ್ಲಿ ರೇಣುಕಾಸ್ವಾಮಿ ಕೈ ಮುಗಿದು ಬೇಡಿಕೊಂಡಿದ್ದ. ಆದರೂ ಗ್ಯಾಂಗ್ ಬಿಟ್ಟಿರಲಿಲ್ಲ. ಕೈಮುಗಿದು ಬೇಡಿಕೊಂಡ ಫೋಟೋಗಳನ್ನು ತೆಗೆದಿದ್ದರು. ಕೇಸಲ್ಲಿ ತಗಲಾಕಿಕೊಂಡ ಮೇಲೆ ಆ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ತನಿಖೆ ನಡೆಸುವ ವೇಳೆ ಪೊಲೀಸರು ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಿ, ಆ ಫೋಟೋಗಳನ್ನು ಚಾರ್ಜ್ ಶೀಟ್ ನಲ್ಲಿ ಸಲ್ಲಿಕೆ ಮಾಡಿದ್ದಾರೆ.
ಸದ್ಯ ಆ ಕೊಲೆಯಾದ ಮೇಲೆ ಏನೆಲ್ಲಾ ಆಯ್ತು ಎಂಬುದರ ಇಂಚಿಂಚು ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಎಲ್ಲಾ ರೀತಿಯ ಸಾಕ್ಷಿಗಳನ್ನು ಕೋರ್ಟ್ ಗೆ ನೀಡಿದ್ದಾರೆ. ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ನಡೆಸಲು ಪೊಲೀಸರು ಮನವಿ ಮಾಡಿದ್ದಾರೆ.