ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 03 : ಚಿತ್ರದುರ್ಗದ ಕಲ್ಲಿನ ಕೋಟೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇಲ್ಲಿರುವ ಒನಕೆ ಓಬವ್ವನ ಕಿಂಡಿ ಸೇರಿದಂತೆ ಹಲವು ಸ್ಥಳಗಳ ಬಗ್ಗೆ ಕುತೂಹಲ ಹೆಚ್ಚು. ಇಲ್ಲಿಗೆ ಬರುವ ಪ್ರವಾಸಿಗರು ಓಡಾಡುವಾಗ ಕೊಂಚ ಎಚ್ಚರವಹಿಸಬೇಕಾಗುತ್ತದೆ. ಯಾಕಂದ್ರೆ ಕೋಟೆ ನೋಡಲು ಬಂದ ವ್ಯಕ್ತಿ, ಕಾಲು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿರುವ ಘಟನೆ ನಡೆದಿದೆ.
ದಾವಣಗೆರೆ ಮೂಲದ ವ್ಯಕ್ತಿ ಕೋಟೆಯಲ್ಲಿ ಕಾಲುಜಾರಿ ಬಿದ್ದಿದ್ದಾರೆ. ದಾವಣಗೆರೆ ಮೂಲದ ಓಂಕಾರ್ ಎಂಬಾತ ಕೋಟೆ ವೀಕ್ಷಣೆಗೆ ಬಂದಿದ್ದರು. ತುಪ್ಪದಕೊಳ ಬಳಿಯ ಕುದುರೆ ಜಾಡು ಏರುವ ವೇಳೆ ಈ ಘಟನೆ ಸಂಭವಿಸಿದೆ. ದಿಢೀರನೇ ಕಾಲು ಜಾರಿ ಬಿದ್ದಿದ್ದಾರೆ. ಕಾಲು ಜಾರಿಬಿದ್ದ ಓಂಕಾರ್ ಅವರಿಗೆ ಎದೆ, ಕೈಕಾಲಿಗೆ ಪೆಟ್ಟು ಬಿದ್ದಿದೆ. ಕಾಲು ಜಾರಿ ಬಿದ್ದ ಓಂಕಾರ್ ಅವರನ್ನು ತಕ್ಷಣ ಅಲ್ಲಿಯೇ ಇದ್ದಂತ ಪ್ರವಾಸಿ ಮಿತ್ರರು, ಭದ್ರತಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಸ್ಟ್ರೆಕ್ಚರ್ ನಲ್ಲಿ ಕೋಟೆಯಿಂದ ಕೆಳಗೆ ಕರೆತಂದಿದ್ದಾರೆ. ಗಾಯಾಳು ಓಂಕಾರ್ ಅವರನ್ನು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಚಿತ್ರದುರ್ಗ ಕೋಟೆ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕಳೆದ ಕೆಲವು ದಿನಗಳ ಹಿಂದಷ್ಟೇ ಕೂಡ್ಲಿಗಿ ಮೂಲದ ವ್ಯಕ್ತಿ ಮತ್ತು ಬೆಂಗಳೂರಿನಿಂದ ಪ್ರವಾಸಕ್ಕೆ ಬಂದ ಯುವತಿ ಕೂಡ ಕಾಲು ಜಾರಿ ಬಿದ್ದಿದ್ದರು. ಎದೆ ಹಾಗೂ ಕಾಲಿಗೆ ಪೆಟ್ಟಾಗಿತ್ತು. ಆ ಘಟನೆ ಮಾಸುವ ಮುನ್ನವೇ ದಾವಣಗೆರೆ ಯುವಕನಿಗೆ ಮತ್ತದೇ ರೀತಿಯ ಅಪಾಯವಾಗಿದೆ. ಕೋಟೆಗೆ ವೀಕ್ಷಣೆಗೆಂದು ಬರುವ ಜನ ಕೊಂಚ ಎಚ್ಚರಿಕೆಯಿಂದ ವೀಕ್ಷಣೆ ಮಾಡಬೇಕಾಗುತ್ತದೆ. ಗೈಡ್ ಗಳು ಕೂಡ ಕೋಟೆಯಲ್ಲಿ ದೊರೆಯುತ್ತಾರೆ. ಸ್ವಲ್ಪವಾದರೂ ಮಾರ್ಗದರ್ಶನ ಪಡೆದು ವೀಕ್ಷಣೆ ಮಾಡಿದರೆ ಒಳಿತು.