ಚಿತ್ರದುರ್ಗ |ಇ-ಸ್ವತ್ತು ಪಡೆಯಲು ಹರಸಾಹಸ : ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ಮನವಿ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 03 : ನಗರ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಗಳು ಎರಡು ವರ್ಷಗಳ ಹಿಂದೆ 11 ಬಿ ಖಾತೆ ಹೊಂದಿರುವ ನಿವೇಶನಗಳು ಹಾಗೂ ಮನೆಗಳ ಇ-ಸ್ವತ್ತುಗಳನ್ನು ನೀಡುವ ಕಡತಗಳನ್ನು ನಗರಸಭೆ ಪೌರಾಯುಕ್ತರಿಗೆ ವರ್ಗಾಯಿಸಿದ್ದರೂ ಇದುವರೆವಿಗೂ 11 ಬಿ ಖಾತೆಯುಳ್ಳವರಿಗೆ ನಿವೇಶನಗಳು ಮತ್ತು ಮನೆಗಳಿಗೆ ಇ-ಸ್ವತ್ತು ನೀಡದೆ ಸತಾಯಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ಮಂಗಳವಾರ ನಗರಸಭೆ ವ್ಯವಸ್ಥಾಪಕಿ ಮಂಜುಳಾರವರಿಗೆ ಮನವಿ ಸಲ್ಲಿಸಲಾಯಿತು.

ಸಾರ್ವಜನಿಕರು ಇ-ಸ್ವತ್ತುಗಳನ್ನು ಪಡೆಯಲು ನಗರಸಭೆಗೆ ಅಲೆದು ಸಾಕಾಗಿದ್ದಾರೆ. ಇ-ಸ್ವತ್ತು ಇಲ್ಲದಿದ್ದರೆ ಅಂತಹ ನಿವೇಶನಗಳಿಗೆ ಸಾಲ ಸೌಲಭ್ಯ ಸಿಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.

ಕರ್ನಾಟಕ ರಾಜ್ಯ ಅನಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಮೇಲೆ ಆಗುತ್ತಿರುವ ದೌರ್ಜನ್ಯ, ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣ, ಜಮೀನು ವಿವಾದ, ಮೀಸಲಾತಿ ಇನ್ನಿತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್ಸಿ. ಎಸ್ಟಿ.ಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದಕ್ಕಾದರೂ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡಬೇಕು. ರಾಜ್ಯಾದ್ಯಂತ 1727 ಪ್ರಕರಣಗಳು ಬಾಕಿಯಿದ್ದು, ಎಲ್ಲವೂ ಇತ್ಯರ್ಥಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೂ ಪ್ರತಿಭಟನಾಕಾರರು ಮನವಿ ಅರ್ಪಿಸಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ಉಪಾಧ್ಯಕ್ಷರುಗಳಾದ ಕೆ.ಗೌಸ್‍ಪೀರ್, ನರಸಿಂಹಸ್ವಾಮಿ ಎಂ.ಆರ್. ಖಜಾಂಚಿ ಡಿ.ಈಶ್ವರಪ್ಪ, ಚಾಂದ್‍ಪೀರ್, ಇಮಾಂ ಮೈಹಿಮುದ್ದೀನ್, ಪ್ರಸನ್ನ, ರಾಜಪ್ಪ, ಗೌಸ್‍ಖಾನ್, ರಫೀಕ್, ರಾಜಣ್ಣ, ಸಲೀಂ, ಇಬಾದುಲ್ಲಾ, ತಿಮ್ಮಯ್ಯ ಎಂ. ಮಹಾಂತಪ್ಪ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *