ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 02 : ವಿದ್ಯುತ್ ಶಾಕ್ ನಿಂದ ಅದೆಷ್ಟೋ ಪ್ರಾಣಗಳು ಹೋಗಿರುವ ಸುದ್ದಿಯನ್ನು ಕೇಳಿದ್ದೇವೆ. ಮಳೆ ಬಂದಾಗ, ಮಳೆ ನೀರಿನಿಂದ ವಿದ್ಯುತ್ ಪ್ರವಹಿಸಿ ಪ್ರಾಣಗಳು ಹೋಗಿವೆ. ವಿದ್ಯುತ್ ತಂತಿಗೆ ನೀರು ತಾಕುವಂತಿದ್ದರೆ ಅಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಅದರಲ್ಲೂ ಚರಂಡಿ ಮಧ್ಯದಲ್ಲಿಯೇ ವಿದ್ಯುತ್ ಕಂಬ ಇರುವುದನ್ನು ನೋಡಿದರೆ ಆತಂಕವಾಗುತ್ತದೆ. ಈ ವಿಚಾರವಾಗಿ ಸ್ಥಳೀಯರು ಸ್ಥಳಾಂತರಿಸುವಂತೆ ಮನವಿಯನ್ನು ಮಾಡಿದ್ದಾರೆ. ಆದರೆ ಅದನ್ನು ನೋಡಿಯೂ ಸಂಬಂಧಪಟ್ಟವರು ನಿರ್ಲಕ್ಷ್ಯ ತೋರಿದರೆ ಹೇಗೆ ? ಯಾರದ್ದಾದರೂ ಪ್ರಾಣಕ್ಕೆ ಅಪಾಯ ಬಂದ ಮೇಲೆಷ್ಟೇ ಗಮನ ಹರಿಸುವುದಾ..?
ನಗರದ ವಿಪಿ ಬಡಾವಣೆಯ ಮುಖ್ಯ ರಸ್ತೆಯಲ್ಲಿಯೇ (ಕೀರ್ತಿ ಆಸ್ಪತ್ರೆ ಸಮೀಪದ ಶ್ರೀನಿಧಿ ಏಜೆನ್ಸೀಸ್ ಪಕ್ಕದಲ್ಲಿ) ವಿದ್ಯುತ್ ಅಪಾಯದ ಮುನ್ಸೂಚನೆ ನೀಡಿದೆ. ರಸ್ತೆ ಬದಿಯಲ್ಲಿರುವ ಚರಂಡಿಯ ಮಧ್ಯದಲ್ಲಿ ವಿದ್ಯುತ್ ಕಂಬ ಅಳವಡಿಸಲಾಗಿದೆ. ಅದರಿಂದ ಅಪಾಯವಿರುವುದು ನೋಡಿದವರಿಗೇನೆ ಅರ್ಥವಾಗುತ್ತದೆ. ಆದಷ್ಟು ಬೇಗ ಸ್ಥಳಾಂತರಿಸಿ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಿಸುವಾಗ ಇಲ್ಲಿದ್ದ ವಿದ್ಯುತ್ ಕಂಬವನ್ನು ಚರಂಡಿ ಮಧ್ಯದಲ್ಲಿಯೇ ಉಳಿಸಿ ಚರಂಡಿ ಹಾಗೂ ರಸ್ತೆ ನಿರ್ಮಾಣವನ್ನು ಹಾಗೇ ಮಾಡಿದ್ದಾರೆ. ಇದರಿಂದ ಆತಂಕಗೊಂಡಿರುವ ಸ್ಥಳೀಯರು ಚರಂಡಿ ಮಧ್ಯದಲ್ಲಿರುವ ಕಂಬವನ್ನು ಪಕ್ಕಕ್ಕೆ ಅಥವಾ ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದರು. ಆದರೆ ಗುತ್ತಿಗೆದಾರರು ಮತ್ತು ಬೆಸ್ಕಾಂ ಇಲಾಖೆಯವರು ವಿದ್ಯುತ್ ಕಂಬವನ್ನು ಚರಂಡಿ ಮಧ್ಯದಲ್ಲಿಯೇ ಉಳಿಸಿ ಕಾಮಗಾರಿ ಮುಗಿಸಿದ್ದಾರೆ.
ಮಳೆಗಾಲದಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯ ಕಂಬಕ್ಕೆ ಅಡ್ಡಲಾಗಿ ನೀರು ಸರಾಗವಾಗಿ ಹರಿಯದೇ ಚರಂಡಿ ಕಟ್ಟಿಕೊಂಡು ನೀರು ರಸ್ತೆಗೆ ಹರಿಯುತ್ತವೆ. ಇದರಿಂದಾಗಿ ದುರ್ವಾಸನೆ ಬರುತ್ತದೆ. ಕಂಬವನ್ನು ಸ್ಥಳಾಂತರಿಸುವಂತೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಆದಷ್ಟೂ ಬೇಗ ಕಂಬವನ್ನು ಬೇರೆಡೆಗೆ ಸ್ಥಳಾಂತರಿಸಲಿ ಎಂಬುದು ನಿವಾಸಿಗಳು ಒತ್ತಾಯಿಸಿದ್ದಾರೆ.