ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 31 : ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾದರೆ ಜಿಲ್ಲೆಯ ರೈತರ, ಜನಸಾಮಾನ್ಯರ, ದುಡಿಯುವ ವರ್ಗದವರಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗುತ್ತದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ವಕೀಲರ ಭವನದಲ್ಲಿ ಶನಿವಾರ ವಕೀಲರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಚುನಾವಣೆಯಲ್ಲಿ ನಿಮ್ಮ ಮತ ಯಾಚಿಸಲು ಬಂದಾಗ ನನ್ನ ಮೇಲೆ ವಿಶ್ವಾಸ ನಂಬಿಕೆಯಿಟ್ಟು ನರೇಂದ್ರಮೋದಿ ಮೂರನೆ ಬಾರಿಗೆ ದೇಶದ ಪ್ರಧಾನಿಯಾಗಲೆಂದು ನನ್ನನ್ನು ಗೆಲ್ಲಿಸಿದ್ದೀರಿ. ಅದೇ ರೀತಿ ಸಿರಾ, ಪಾವಗಡದಲ್ಲೂ ಹೆಚ್ಚಿನ ಮತಗಳನ್ನು ನೀಡಿದ್ದಾರೆ. ನನ್ನ ಇತಿಮಿತಿಯೊಳಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುತ್ತೇನೆ. ಹಾಗೆಯೆ ರಾಜ್ಯ ಸರ್ಕಾರದಿಂದ ಆಗುವ ಕೆಲಸಗಳನ್ನು ಮಾಡಿಸುವಲ್ಲಿ ಪ್ರಯತ್ನಿಸುತ್ತೇನೆಂದು ವಕೀಲರುಗಳಿಗೆ ಭರವಸೆ ನೀಡಿದರು.
ಮಧ್ಯ ಕರ್ನಾಟಕದ ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ರೈತರು ಮಳೆಯನ್ನೆ ಆಶ್ರಯಿಸುತ್ತಿದ್ದಾರೆ. ಹಾಗಾಗಿ ಭದ್ರಾ ಮೇಲ್ದಂಡೆ ಯೋಜನೆ ನಿಗಧಿತ ಅವಧಿಯಲ್ಲಿ ಪೂರ್ಣಗೊಂಡು ನೀರು ಹರಿದಾಗ ರೈತರ ಮೊಗದಲ್ಲಿ ಮಂದಹಾಸ ಮೂಡಿ ಜಿಲ್ಲೆಯ ಸಮಸ್ಯೆ ಬಗೆಹರಿಯುತ್ತದೆ ಎಂದು ತಿಳಿಸಿದರು.
ವಕೀಲರ ಸಂಘಕ್ಕೆ ಕಂಪ್ಯೂಟರ್ ಹಾಗೂ ಬೆರಳಚ್ಚು ಕೊಠಡಿ, ಸ್ಟೇಷನರಿ ಅಂಗಡಿ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿ ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ವಕೀಲರ ಸಂಘದವರು ಸಲ್ಲಿಸಿದ ಮನವಿಗೆ ಯಾವುದೇ ಭರವಸೆ, ಆಶ್ವಾಸನೆಯನ್ನು ನೀಡದೆ ವೇದಿಕೆಯಲ್ಲೇ ಸ್ಯಾಂಕ್ಷನ್ ಮಾಡಿದ ಸಂಸದ ಗೋವಿಂದ ಕಾರಜೋಳರವರು ಎಸ್ಟಿಮೇಷನ್ ತಯಾರಿಸಿ ತರುವಂತೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‍ರನ್ನು ಮೊಬೈಲ್‍ನಲ್ಲಿ ಸಂಪರ್ಕಿಸಿ ಸೂಚಿಸಿದರು.
ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ವಕೀಲರ ಸಂಘಕ್ಕೆ ಹಣ ಕೊಡುವಂತೆ ಇದುವರೆವಿಗೂ ಯಾವುದೇ ರಾಜಕಾರಣಿಗಳ ಬಳಿ ಕೇಳಿಲ್ಲ. ವಕೀಲರುಗಳಿಗೆ ಮತ್ತು ಕಕ್ಷಿದಾರರಿಗೆ ಅನೇಕ ಸಮಸ್ಯೆಗಳಿವೆ ಅವುಗಳನ್ನು ಬಗೆಹರಿಸುವಂತೆ ಸಂಸದ ಗೋವಿಂದ ಕಾರಜೋಳರವರಲ್ಲಿ ಮನವಿ ಮಾಡಿದರು.
ಈಗಿರುವ ನ್ಯಾಯಾಲಯದ ಕಟ್ಟಡ 1969 ರಲ್ಲಿ ನಿರ್ಮಾಣವಾಗಿದ್ದು, ಹೊಸ ಕಟ್ಟಡಕ್ಕೆ 93 ಕೋಟಿ ರೂ.ಗಳು ಮಂಜೂರಾಗಿದ್ದು, ರಾಜ್ಯ ಸರ್ಕಾರದಿಂದ ವಿಳಂಭವಾಗುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ತಕ್ಷಣವೆ ಬಿಡುಗಡೆಗೊಳಿಸಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು. ಅದಕ್ಕೆ ನಿಮ್ಮ ಪ್ರಯತ್ನ ಮುಖ್ಯ ಎಂದು ವೈ.ತಿಪ್ಪೇಸ್ವಾಮಿ ಸಂಸದರಲ್ಲಿ ಕೋರಿದರು.
ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‍ಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಗಂಗಾಧರ್, ಸಹ ಕಾರ್ಯದರ್ಶಿ ಗಿರೀಶ್ ವಿ.ಮಲ್ಲಾಪುರ ವೇದಿಕೆಯಲ್ಲಿದ್ದರು.
ನೂರಾರು ವಕೀಲರು ಹಾಗೂ ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಈ ಸಂದರ್ಭದಲ್ಲಿ ಹಾಜರಿದ್ದರು.