ಮಳೆ ಕೈಕೊಟ್ಟಾಗ.. ಮಳೆ ಜಾಸ್ತಿಯಾದಾಗ ತರಕಾರಿ, ಸೊಪ್ಪಿನ ಬೆಲೆಯಲ್ಲೂ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಈಗ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಆದರೆ ಈರುಳ್ಳಿ ಬೆಲೆ ಮಾತ್ರ ಗಗನಕ್ಕೇರಿದೆ. ದಿನೇ ದಿನೇ ಮಾರುಕಟ್ಟೆಯಲ್ಲಿ ಬೆಲೆಯ ಹೆಚ್ಚಳ ಕಂಡು ಗ್ರಾಹಕರು ದಂಗಾಗುತ್ತಿದ್ದಾರೆ. ಹಲವೆಡೆ ಅತಿಯಾದ ಮಳೆಯಿಂದಾಗಿ ಬೆಲೆ ಏರಿಕೆಯಾಗುತ್ತಿದೆ.
ಬೆಳ್ಳುಳ್ಳಿಯ ಬೆಲೆಯನ್ನಂತು ಕೇಳುವುದೇ ಬೇಡ. ಮಾರುಕಟ್ಟೆಯಲ್ಲಿ ಕೆಜಿಗೆ 400 ರೂಪಾಯಿ ಆಗಿದೆ. ನಿರಂತರ ಮಳೆ ಸುರಿದಿದ್ದರಿಂದ ಕೊಳೆ ರೋಗ ಬಂದು ಈರುಳ್ಳಿ ಇಳುವರಿಯೂ ಕಡಿಮೆಯಾಗಿದೆ. ಕೆಜಿ ಈರುಳ್ಳಿ 60-70 ರೂಪಾಯಿ ತನಕ ತಲುಪಿದೆ. ಕೊಳೆ ರೋಗದಿಂದ ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಕುಸಿತವಾಗಿದ್ದು, ರಾಜ್ಯದ ಮಾರುಕಟ್ಟೆಯಲ್ಲಿ ಕರ್ನಾಟಕದ ಈರುಳ್ಳಿ ಬೆಳೆಯೇ ಬಾರದಂತೆ ಆಗಿದೆ. ರಾಜ್ಯದಿಂದ ಈರುಳ್ಳಿ ಬೆಲೆಯ ಲಾರಿಗಳೇ ಸುಳಿಯುತ್ತಿಲ್ಲ. ಮಾರುಕಟ್ಟೆಗಳಲ್ಲಿ ಬರೀ ಮಹಾರಾಷ್ಟ್ರದ ಈರುಳ್ಳಿಗಳೇ ದರ್ಬಾರ್ ನಡೆಸುತ್ತಿವೆ.
ಅದರಲ್ಲೂ ಯಶವಂತಪುರ ಹಾಗೂ ದಾಸನಪುರ ಮಾರುಕಟ್ಟೆಗಳಿಗೆ ಪ್ರತಿದಿನ 127 ಈರುಳ್ಳಿಯ ಲಾರಿಗಳು ಬರುತ್ತವೆ. ಅದರಲ್ಲಿ ಕೇವಲ 20 ಲಾರಿಗಳು ಮಾತ್ರ ಕರ್ನಾಟಕದಿಂದ ಈರುಳ್ಳಿ ತರುತ್ತಾರೆ. ಆ 20 ಲಾರಿಗಳು ಬರುವುದು ಚಿತ್ರದುರ್ಗ ಜಿಲ್ಲೆಯಿಂದ ಮಾತ್ರ. ಸದ್ಯ ಚಿತ್ರದುರ್ಗ ಬೆಳೆಗಾರರು ಬೆಳೆದ ಬೆಳೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಉತ್ತರ ಕರ್ನಾಟಕ ಭಾಗದಲ್ಲಿಯೂ ಈರುಳ್ಳಿ ಬೆಳೆಯನ್ನು ಬೆಳೆದಿದ್ದಾರೆ. ಆದರೆ ಬೆಳೆ ಮಾರುಕಟ್ಟೆಗೆ ಬರುವುದಕ್ಕೆ ಇನ್ನೂ ಒಂದು ತಿಂಗಳು ಬೇಕಾಗುತ್ತದೆ. ಜೊತೆಗೆ ಆ ಭಾಗದಲ್ಲೂ ಮಳೆ ಜೋರಾಗಿದೆ. ಹೀಗಾಗಿ ಇಳುವರಿಯಲ್ಲಿ ಕುಸಿತವಾಗಬಹುದು. ಮಳೆಯಿಂದಾಗಿ ಕರ್ನಾಟಕದಿಂದ ಬರುವ ಈರುಳ್ಳಿ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಲೆ ಇನ್ನು ಹೆಚ್ಚಾಗಬಹುದು.