ವರದಿ : ಸುರೇಶ್ ಪಟ್ಟಣ್
ಚಿತ್ರದುರ್ಗ, (ನ.21) : ಕನ್ನಡ ಸಾಹಿತ್ಯ ಪರಿಷತ್‌ನ ಬೈಲಾ ತಿದ್ದುಪಡಿಯಾಗಬೇಕು. ಜಿಲ್ಲಾ, ತಾಲ್ಲೂಕು ಮತ್ತು ರಾಜಾಧ್ಯಕ್ಷರನ್ನು ಆಯ್ಕೆ ಮಾಡುವ ಕಾರ್ಯವಾಗಬೇಕಿದೆ ಮತ್ತು ಸಾಹಿತ್ಯದ ಅಭಿವೃದ್ದಿಗೆ ವಿಶೇಷವಾದ ಒತ್ತು ನೀಡಬೇಕಿದೆ ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಆಭಿಪ್ರಾಯಪಟ್ಟಿದ್ದಾರೆ.
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಾನುವಾರ ನಡೆದ ಕಸಾಪ ಚುನಾವಣೆಯಲ್ಲಿ ಮತದಾನ ನೇರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಈಗಿನ ಪರಿಷತ್‌ನಲ್ಲಿ ಸಾಹಿತ್ಯ ಬಾರದಿರುವವರು ಸಹ ಇದ್ದಾರೆ. ಇದರಿಂದ ಪರಿಷತ್ ಸಾಹಿತ್ಯ ಪರಿಷತ್ ಆಗುವುದಿಲ್ಲ, ನಿಜವಾದ ಅರ್ಥದಲ್ಲಿ ಪರಿಷತ್ ತನ್ನ ಸದಸ್ಯರನ್ನು ಹೊಂದಬೇಕಿದೆ, ಇದರಲ್ಲಿ ಸಾಹಿತ್ಯಾಸಕ್ತರಿಗಿಂತ ಸಾಹಿತ್ಯವನ್ನು ಬಲ್ಲವರು ಸದಸ್ಯರಾದಾಗ ಮಾತ್ರ ಪರಿಷತ್‌ಗೆ ನಿಜವಾದ ಅರ್ಥ ಬರುತ್ತದೆ ಎಂದು ಶ್ರೀಗಳು ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಮುಖ್ಯಮಂತ್ರಿಗಳನ್ನು ಯಾರು ಸಹಾ ನೇರವಾಗಿ ಆಯ್ಕೆ ಮಾಡುವುದಿಲ್ಲ, ಜನರಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ, ಇದೇ ರೀತಿ ಕನ್ನಡ ಸಾಹಿತ್ಯ ಪರಿಷತ್ ನಲ್ಲೂ ಸಹಾ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಈಗಿನಂತೆ ನೇರವಾಗಿ ಮಾಡದೇ ಜಿಲ್ಲಾ ಮತ್ತು ತಾಲ್ಲೂಕು ಆಧ್ಯಕ್ಷರು ಆಯ್ಕೆ ಮಾಡುವ ರೀತಿಯಲ್ಲಿ ಮುಂಬರುವ ನೂತನ ಕಾರ್ಯಕಾರಿ ಸಮಿತಿ ತನ್ನ ಬೈಲಾವನ್ನು ತಿದ್ದುಪಡಿ ಮಾಡುವಂತೆ ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಆಗ್ರಹಿಸಿದರು.
ಪರಿಷತ್ ಚುನಾವಣೆಗಳು ಸಾಮಾನ್ಯ ಚುನಾವಣೆಯಂತೆ ಮಾರ್ಪಾಟಾಗಿದೆ.
ಇಲ್ಲಿಯೂ ಸಹಾ ಚುನಾವಣೆಯನ್ನು ನಡೆಸಲಿ ಲಕ್ಷಾಂತರ ರೂ.ಗಳನ್ನು ವ್ಯಯ ಮಾಡಬೇಕಾಗಿದೆ, ಇದರಿಂದ ಪರಿಷತ್ ಚುನಾವಣೆಗೂ ಸಾಮಾನ್ಯ ಚುನಾವಣೆಗೂ ಯಾವುದೇ ರೀತಿಯ ವ್ಯತ್ಯಾಸ ಕಾಣುತ್ತಿಲ್ಲ ಇದರಿಂದ ಚುನಾವಣೆಗೆ ಖರ್ಚು ಮಾಡುವ ಹಣವನ್ನು ಸಾಹಿತ್ಯ ಪ್ರಕಟಣೆ ಮಾಡುವಲ್ಲಿ ವ್ಯಯ ಮಾಡಬಹುದಾಗಿದೆ. ಹಿಂದೇ ಈ ರೀತಿಯಾಗಿ ಇರಲಿಲ್ಲ. ರಾಜಕೀಯದಲ್ಲಿ ನಡೆಯುವುದೇ ಇಲ್ಲಿ ನಡೆಯುತ್ತಿದೆ ಇದು ದುರಾದೃಷ್ಟಕರ ಎಂದು ಶ್ರೀಗಳು ತಿಳಿಸಿದರು.