ಸುದ್ದಿಒನ್, ಚಿತ್ರದುರ್ಗ, ಆಗಸ್ಟ್ 23 : ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಸುರಿದ ಮಳೆ ರೈತರಿಗೆ ಸಂತಸದ ಜೊತೆಗೆ ಸಂಕಷ್ಟವನ್ನೂ ತಂದಿದೆ. ಕೆಲವು ಬೆಳೆಗಳಿಗೆ ಮಳೆ ಅನುಕೂಲವಾಗಿದ್ದರೆ ಇನ್ನೂ ಕೆಲವು ಬೆಳಗಳಿಗೆ ರೋಗ, ಕೀಟದ ಬಾಧೆ ಕಾಡುತ್ತಿದೆ. ಕೆಲವು ಬೆಳೆಗಳು ಕೊಳೆತು ಹೋಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚಳ್ಳಕೆರೆ ತಾಲೂಕಿನಾದ್ಯಂತ 11,299 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದ್ದು ಮಳೆಗೆ 80 ಎಕರೆ ಪ್ರದೇಶದಲ್ಲಿ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದೆ.
ತಾಲ್ಲೂಕಿನ ರಾಮಜೋಗಿಹಳ್ಳಿ, ಬಾಲೆನಹಳ್ಳಿ, ಹೆಗ್ಗೆರೆ, ಹೊಟ್ಟಜ್ಜನ ಕಪಿಲೆ, ಸಾಣಿಕೆರೆ, ಹಿರೇಮಧುರೆ, ಚಿಗುತನಹಳ್ಳಿ ಕಪ್ಪುಭೂಮಿ ಇರುವಂತಹ ಪ್ರದೇಶದಲ್ಲಿ ಮಳೆ ನೀರು ನಿಂತು ಈರುಳ್ಳಿ ಬೆಳಗ್ಗೆ ಕೊಳೆರೋಗ ಆವರಿಸಿದೆ.
ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ವಿರುಪಾಕ್ಷಪ್ಪನವರು ರೋಗಪೀಡಿತ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರಿಗೆ ಉಳಿದಂಥ ಬೆಳೆಗಳನ್ನು ಉಳಿಸಿಕೊಳ್ಳಲು ಹಲವು ಸಲಹೆಗಳನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಈರುಳ್ಳಿ ಬೆಳೆಯು ಒಂದು ಸೂಕ್ಷ್ಮ ಬೆಳೆಯಾಗಿದ್ದು ಇದಕ್ಕೆ ಹೆಚ್ಚು ಮಳೆ ಬಂದರೂ ಸಹ ಹಲವು ರೋಗದ ಬಾಧೆ ಕಾಡುತ್ತದೆ. ಈಗಾಗಲೇ ಮಳೆಯಿಂದ ಬೆಳೆ ಇರುವ ಜಮೀನುಗಳಿಗೆ ನೀರು ನುಗ್ಗಿದ್ದು ಕೊಳೆರೋಗ ಕಾಣಿಸಿಕೊಂಡಿದೆ. ಕೆಲವು ಜಮೀನುಗಳಲ್ಲಿ ಈರುಳ್ಳಿ ಬೆಳೆಗೆ ಸುಳಿರೋಗ, ನೇರಳೆ, ಮಚ್ಚೆ ರೋಗ ಇತರೆ ರೋಗಗಳು ಕಾಣಿಸಿಕೊಂಡಿದ್ದು ರೋಗದ ಹತೋಟಿಗೆ ರೈತರಿಗೆ ಹಲವು ಕ್ರಮಗಳನ್ನ ಕೈಗೊಳ್ಳುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಓ. ಟಿ. ತಿಪ್ಪೇಸ್ವಾಮಿ, ಚಿದಾನಂದಪ್ಪ, ನಾಗಣ್ಣ, ತಿಮ್ಮೇಗೌಡ, ಹಾಗೂ ತೋಟಗಾರಿಕೆ ಅಧಿಕಾರಿ ಪ್ರವೀಣ್ ಇದ್ದರು.