ಚಿತ್ರದುರ್ಗ. ಆಗಸ್ಟ್22: ಉತ್ತಮ ಆರೋಗ್ಯ ಮತ್ತು ಪೋಷಣೆಗೆ ಆರೋಗ್ಯಕರ ಆಹಾರ ಅತ್ಯಗತ್ಯ ಎಂದು ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಅಕ್ಷತಾ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಪಂಡರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಆರೋಗ್ಯ ಇಲಾಖೆ, ಎಸ್‌ಆರ್‌ಎಸ್ ಆಸ್ಕರ್ ಹಿರಿಯ ಪ್ರಾಥಮಿ ಶಾಲೆಯ ಸಹಯೋಗದೊಂದಿಗೆ ಸಮುದಾಯ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ಆರೋಗ್ಯ ಮತ್ತು ಪೋಷಣೆಗೆ ಆರೋಗ್ಯಕರ ಆಹಾರ ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಆರೋಗ್ಯಕರ ಆಹಾರಕ್ಕಾಗಿ ವಿವಿಧ ಆಹಾರಗಳನ್ನು ತಿನ್ನುವುದು ಮತ್ತು ಕಡಿಮೆ ಉಪ್ಪು, ಸಕ್ಕರೆಗಳು ಮತ್ತು ಸ್ಯಾಚುರೇಟೆಡ್ ಮತ್ತು ಕೈಗಾರಿಕಾ-ಉತ್ಪಾದಿತ ಟ್ರಾನ್ಸ್-ಕೊಬ್ಬುಗಳನ್ನು ಸೇವಿಸುವುದು ಅತ್ಯಗತ್ಯ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾಹಿತಿ ಶಿಕ್ಷಣ ನೀಡಿ, ಆರೋಗ್ಯಕರ ಆಹಾರವು ವಿವಿಧ ಆಹಾರಗಳ ಸಂಯೋಜನೆ ಒಳಗೊಂಡಿದೆ. ಆರೋಗ್ಯಕರ ಆಹಾರವು ಜೀವನದ ಆರಂಭದಲ್ಲಿ ಪ್ರಾರಂಭವಾಗುತ್ತದೆ. ಸ್ತನ್ಯಪಾನವು ಆರೋಗ್ಯಕರ ಬೆಳವಣಿಗೆ ಉತ್ತೇಜಿಸುತ್ತದೆ ಮತ್ತು ದೀರ್ಘಾವಧಿಯ ಆರೋಗ್ಯ ಪ್ರಯೋಜನ ಪಡೆಯಬಹುದು. ಅಧಿಕ ತೂಕ ಅಥವಾ ಬೊಜ್ಜು ಆಗುವ ಅಪಾಯ ಕಡಿಮೆ ಮಾಡುತ್ತದೆ ಎಂದರು.
ಆರೋಗ್ಯಕರ ಆಹಾರಕ್ಕಾಗಿ ಜನ್ಮದಿಂದ 6 ತಿಂಗಳವರೆಗೆ ಶಿಶುಗಳಿಗೆ ತಾಯಿಯ ಹಾಲನ್ನು ಮಾತ್ರ ನೀಡುವುದು ಮುಖ್ಯವಾಗಿದೆ. ನಿಮ್ಮ ಮಗುವಿಗೆ ಎರಡು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರೆಗೆ ಸ್ತನ್ಯಪಾನ ಮುಂದುವರಿಸುವಾಗ, 6 ತಿಂಗಳ ವಯಸ್ಸಿನಲ್ಲಿ ವಿವಿಧ ಸುರಕ್ಷಿತ ಮತ್ತು ಪೌಷ್ಟಿಕ ಪೂರಕ ಆಹಾರ ಪರಿಚಯಿಸುವುದು ಮುಖ್ಯವಾಗಿದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು ಬಗ್ಗೆ ತಿಳಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಸನ್ನ ಐಯೋಡಿನ್ ಉಪ್ಪಿನ ಬಳಕೆ ಬಗ್ಗೆ ತಿಳಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ ರೆಡ್ಡಿ ಅವರು ಕೀಟಜನ್ಯ ವಾಯುಜನ್ಯ ಮತ್ತು ಜಲಜನ್ಯ ರೋಗಗಳ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೃಷ್ಣಪ್ಪ, ಸಿದ್ದೇಶ್, ಪ್ರಸನ್ನಾ ಗಂಗಾಧರ, ಆರೋಗ್ಯ ಸುರಕ್ಷತಾಧಿಕಾರಿಗಳಾದ ಮಮತಾ, ಆಶಾ, ಶಾರದ ಬಾಯಿ, ಎಸ್.ಆರ್.ಎಸ್ ಆಸ್ಕರ್ ಹಿರಿಯ ಪ್ರಾಥಮಿಕ ಶಾಲೆಯ ಸಂಯೋಜಕಿ ಪಇ. ಶೈಲಾ, ಶಿಕ್ಷಕರಾದ ಶಾಂಬವಿ, ಅನುರಾದ ಮತ್ತು ಮಧು ಇದ್ದರು.