ಬೆಂಗಳೂರು: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗೆ ಈಗಾಗಲೇ ಅರ್ಜಿ ಕರೆಯಲಾಗಿದೆ. ಅರ್ಜಿ ಹಾಕಿರುವವರ ಗಮನಕ್ಕೆ, ನಿಮ್ಮ ಅರ್ಜಿ ಸ್ವೀಕಾರವಾಗದೆ ಇದ್ದರೆ ಮತ್ತೊಮ್ಮೆ ದಾಖಲೆಗಳನ್ನು ಸಲ್ಲಿಸಲು ಆಗಸ್ಟ್ 26 ಕೊನೆಯ ದಿನವಾಗಿದೆ. ಆಗಸ್ಟ್ 26ರ ಒಳಗೆ ಪೂರಕ ದಾಖಲೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗಿದೆ. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.
ಇನ್ನು ಅರ್ಜಿದಾರರು ತಮ್ಮ ಅರ್ಜಿ ಏನಾಗಿದೆ ಎಂಬುದರ ಬಗ್ಗೆ ಪ್ರಾಧಿಕಾರದ ವೆಬ್ಸೈಟ್ ನಲ್ಲಿ ಪರಿಶೀಲನೆ ಮಾಡಬಹುದು. ಗ್ರಾಮ ಆಡಳಿತ ಹುದ್ದೆಗೆ ಅರ್ಜಿಬಸಲ್ಲಿಕೆ ಮಾಡಿರುವ ಪ್ರತಿಯೊಬ್ಬ ಅಭ್ಯರ್ಥಿಯು ಕಡ್ಡಾಯವಾಗಿ ಕನ್ನಡ ಪರೀಕ್ಷೆಗೆ ಹಾಜರಾಗಲೇಬೇಕು. ಸೆಪ್ಟೆಂಬರ್ 29ರಂದು ಕನ್ನಡ ಕಡ್ಡಾಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಂಡು ಈ ಪರೀಕ್ಷೆಗೆ ತಪ್ಪದೇ ಹಾಜರಾಗಬೇಕೆಂದು ಸೂಚಿಸಲಾಗಿದೆ.
ಕರ್ನಾಟಕ ನಾಗರಿಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು, 2021 ರ ಅನ್ವಯ, ಕನ್ನಡ ಭಾಷಾ ಪರೀಕ್ಷೆಯಲ್ಲಿ 150 ಅಂಕಗಳಿಗೆ ಕನಿಷ್ಠ 50 ಅಂಕಗಳನ್ನು ಗಳಿಸಬೇಕು. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಅಕ್ಟೋಬರ್ 27ರಂದು ಪತ್ರಿಕೆ- 1 ಮತ್ತು ಪತ್ರಿಕೆ-2 ಇವುಗಳನ್ನು ಒಳಗೊಂಡ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ವಿವರಿಸಿದ್ದಾರೆ. ಅರ್ಜಿಯಲ್ಲಿ ಏನಾದರೂ ಸಮಸ್ಯೆಯಾಗಿ ಸ್ವೀಕಾರವಾಗದೆ ಇದ್ದವರಿಗೆ ಕೆಇಎ ಮತ್ತೊಂದು ಅವಕಾಶ ಕಲ್ಪಿಸಿಕೊಟ್ಟಿದೆ. ಈ ಮೂಲಕ ಅರ್ಜಿ ತಿರಸ್ಕಾರಕ್ಕೆ ಕಾರಣವೇನೆಂಬುದುನ್ನು ತಿಳಿದು, ಮತ್ತೆ ಹಾಕುವ ಅವಕಾಶವಿದೆ.