ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.16 : ನಾಳೆ ನಡೆಯಲಿರುವ ಸರ್ಕಾರಿ ನೌಕರರ ಅಭಿನಂದನಾ ಸಮಾರಂಭಕ್ಕೆ ರಾಜ್ಯದ ಹಾಗೂ ಚಿತ್ರದುರ್ಗ ಜಿಲ್ಲೆಯ ಸಮಸ್ತ ಸರ್ಕಾರಿ NPS ನೌಕರರು ಬಹಿಷ್ಕಾರ ಮಾಡಲಾಗುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಡಾ.ಸ.ರಾ.ಲೇಪಾಕ್ಷ ತಿಳಿಸಿದ್ದಾರೆ.
ಕಳೆದ ಸುಮಾರು ಎಂಟು ವರ್ಷಗಳಿಂದ ನೂರಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ NPS ಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶಾಂತಾರಾಮ್ ಹಾಗೂ ಪದಾಧಿಕಾರಿಗಳು ನೇತೃತ್ವದಲ್ಲಿ ಕಾರ್ಯಗಾರ ಮಾಡಿದ್ದು, NPS ರದ್ದತಿಯ ವಿಷಯವು ಕ್ಯಾಬಿನೆಟ್ ಹಂತದಲ್ಲಿ ಅನುಮೋದನೆ ಪಡೆಯಲು ಬಾಕಿ ಇದೆ.
ಈ ಸಂದರ್ಭದಲ್ಲಿ NPS ನೌಕರರ OPS ಬೇಡಿಕೆಯ ದಿಕ್ಕನ್ನು ತಪ್ಪಿಸಲು ಹಾಗೂ ಸಮಾವೇಶಗಳಿಗೆ NPS ನೌಕರರನ್ನು ಸೆಳೆಯುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ನಾಳೆ (ಆಗಸ್ಟ್. 17 ರಂದು ಆಯೋಜಿಸಿರುವ NPS ನೌಕರರ ಕಾರ್ಯಾಗಾರವನ್ನು ವಿರೋಧಿಸುವುದು ಹಾಗೂ ಬಹಿಷ್ಕರಿಸುವುದು ಮತ್ತು ಮುಂದಿನ ದಿನಗಳಲ್ಲಿ ಯಾವುದೇ ಸಂಘಟನೆಗಳು NPS ರದ್ದತಿಯ ಹಂತದಲ್ಲಿ ಇರುವಾಗ ಕಾರ್ಯಾಗಾರಗಳನ್ನು ಏರ್ಪಡಿಸಿದ್ದಲ್ಲಿ ಅಂತಹ ಎಲ್ಲಾ ಕಾರ್ಯಾಗಾರಗಳನ್ನು ಬಹಿಷ್ಕರಿಸುವುದು ಹಾಗೂ ವಿರೋಧಿಸುವ ನಿರ್ಣಯವನ್ನು ಇತ್ತಿಚೆಗೆ ನಡೆದ ರಾಜ್ಯ NPS ನೌಕರರ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ತಾಲ್ಲೂಕು ಅಧ್ಯಕ್ಷರು, ಮತ್ತು ಜಿಲ್ಲೆಯ ಹಾಗೂ ರಾಜ್ಯದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು ಎಂದು ಕ.ರಾ.ಸ. NPS ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಸ.ರಾ.ಲೇಪಾಕ್ಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.