ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.12 : ಬೆಸ್ಕಾಂ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಮೇ ತಿಂಗಳಲ್ಲಿ ನಿವೃತ್ತಿಯಾದ ಪಾವಗಡ ತಾಲೂಕಿನ ಕೋಟೆಗುಡ್ಡದ ಜೂನಿಯರ್ ಇಂಜಿನಿಯರ್ ರಾಮಾಂಜನೇಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಅಕ್ರಮ ಎಸಗಿದ್ದು ಆತನ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮವಹಿಸುವಂತೆ ಚಿತ್ರದುರ್ಗ ಎಎಪಿ ಜಿಲ್ಲಾಧ್ಯಕ್ಷ ಕೆ. ಜಗದೀಶ್ ಅವರು ಒತ್ತಾಯಿಸಿದ್ದಾರೆ.
ನಗರದ ಚಿತ್ರದುರ್ಗ ವಲಯ ಕಛೇರಿಯ ಮುಖ್ಯ ಇಂಜಿನಿಯರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಕೆಲಸ ಮಾಡುತ್ತದ್ದ ಅವಧಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ಕುಡಿಯುವ ನೀರು ಎತ್ತಲು ಅಳವಡಿಸಿರುವ ಪಂಪ್ ಸೆಟ್‌ಗೆ (TRANSFORMER) ಪರಿವರ್ತಕಗಳನ್ನು ಕಾನೂನು ಬಾಹಿರವಾಗಿ ಬಿಚ್ಚಿಕೊಂಡು ಹೋಗಿ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿ ಇಲಾಖೆಯ ಬೊಕ್ಕಸಕ್ಕೆ ನಷ್ಟ ಉಂಟುಮಾಡಿ ಕರ್ತವ್ಯಲೋಪ ಎಸಗಿದ್ದಾರೆ. ಹಾಗಾಗಿ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಇದೇ ಸಮಯದಲ್ಲಿ ತುಮಕೂರು ಜಿಲ್ಲಾ ಅಮ್ ಆದ್ಮಿ ಪಕ್ಷದ ಸಂಘಟನಾ ಕಾರ್ಯದರ್ಶಿ ಎನ್. ರಾಮಾಂಜಿನಪ್ಪ ಮಾತನಾಡಿ, ಸುಮಾರು 11 ಗ್ರಾಮಗಳಲ್ಲಿ ಕುಡಿಯುವ ನೀರು ಎತ್ತುವ ಸಲುವಾಗಿ ಅಳವಡಿಸಲಾಗಿದ್ದ 16 ಪರಿವರ್ತಕಗಳನ್ನು ಇಲಾಖೆಯ ಅನುಮತಿ ಇಲ್ಲದೆ ಕಾನೂನು ಬಾಹಿರವಾಗಿ ಬಿಚ್ಚಿಕೊಂಡು ಹೋಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಗಂಗಸಾಗರ, ರಂಗಸಮುದ್ರ, ಕಾಶಿಪುರ, ಸಾರ್ವಾಟಪುರ, ಓಬಳಾಪುರ -3 ಟಿಸಿಗಳು, ಸಿಂಗರೆಡ್ಡಿಹಳ್ಳಿ-2 ಟಿಸಿಗಳು, ಕೋಟಗುಡ್ಡ, ಕೆಂಚಮ್ಮನಹಳ್ಳಿ,-2 ಟಿಸಿಗಳು, ಲಿಂಗದಹಳ್ಳಿ, ಅರೆಕ್ಯಾತನಹಳ್ಳಿ, ಸಾಸಲುಕುಂಟೆ ಈ ಎಲ್ಲಾ ಗ್ರಾಮಗಳಿಂದ ಒಟ್ಟು 16 (TRANSFORMER) ಪರಿವರ್ತಕಗಳು ಇರುವುದಿಲ್ಲ.
ನಾವುಗಳು ಖುದ್ದಾಗಿ ಹೋಗಿ ಸ್ಥಳ ಪರಿಶೀಲಿಸಲಾಗಿ ಈ ಗ್ರಾಮಗಳಲ್ಲಿ ಪರಿವರ್ತಕಗಳು (TC) ಇಲ್ಲದೆ ಖಾಲಿ ಕಂಬಗಳು ಇರುವುದು ಕಂಡುಬಂದಿದೆ. ಈ ರೀತಿಯಾಗಿ ಇನ್ನೂ ಹಲವಾರು ಗ್ರಾಮಗಳಲ್ಲಿ ಟಿ.ಸಿ.ಗಳನ್ನು ಬಿಚ್ಚಿಕೊಂಡು ಹೋಗಿದ್ದು ಹಾಲಿ ವಸ್ತು ಸ್ಥಿತಿಯಂತೆ ಮೆಲ್ಕಾಣಿಸಿದ ಪ್ರತಿ ಗ್ರಾಮಗಳಲ್ಲಿ ಖಾಲಿ ಕಂಬಗಳು ಮಾತ್ರ ಇರುವುದನ್ನು ಪ್ರತಿ ಗ್ರಾಮಗಳಲ್ಲಿ ತೆಗೆದಿರುವ ಪೋಟೋಗಳನ್ನು ಸಾಕ್ಷಿಯಾಗಿ ಸಲ್ಲಿಸಿದ್ದೇವೆ. ಅಧಿಕಾರಿಗಳೇ ಭ್ರಷ್ಟರಾದರೆ ಏನು ಮಾಡಬೇಕು. ಇದರ ಬಗ್ಗೆ ಹೆಚ್ಚಿನ ರೀತಿಯ ತನಿಖೆ ಆಗಬೇಕು ಎಂದು ತಿಳಿಸಿದರು.
ಆದ್ದರಿಂದ ಜೂನಿಯರ್ ಇಂಜಿನಿಯರ್ ಆಗಿ ಕೋಟಗುಡ್ಡ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮಾಂಜನೇಯ ಅವಧಿಯಲ್ಲಿ ನಡೆದಿರುವ ಅಕ್ರಮ, ಅವ್ಯವಹಾರ, ಅಧಿಕಾರ ದುರಪಯೋಗ, ಕರ್ತವ್ಯಲೋಪದ ಬಗ್ಗೆ ತಾವುಗಳು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಎಪಿ ಕಾರ್ಯಕರ್ತರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಅಮ್ ಆದ್ಮಿ ಪಕ್ಷದ ಸಂಘಟನಾ ಕಾರ್ಯದರ್ಶಿ ಎನ್. ರಾಮಾಂಜಿನಪ್ಪ, ಮುಖಂಡರಾದ ರವಿ, ಲೋಕೇಶ್ವರಪ್ಪ, ಲಿಂಗರಾಜು ಇತರೆ ಕಾರ್ಯಕರ್ತರು ಹಾಜರಿದ್ದರು.