ದಾವಣಗೆರೆ: ಪರೀಕ್ಷೆ ಅನ್ನೋದು ಮಕ್ಕಳ ಭವಿಷ್ಯದ ಬುನಾದಿ. ಬೇಗ ವಿದ್ಯಾಭ್ಯಾಸ ಮುಗಿಸಿ, ಕೆಲಸಕ್ಕೆ ಹೋಗುವ ಮೂಲಕ ಜೀವನವನ್ನು ಕಟ್ಟಿಕೊಳ್ಳುತ್ತಾರೆ. ಅಥವಾ ಹೈಯರ್ ಎಜುಕೇಷನ್ ಮಾಡಿಕೊಳ್ಳುವ ಪ್ಲ್ಯಾನ್ ಮಾಡಿಕೊಳ್ಳುತ್ತಾರೆ. ಪರೀಕ್ಷೆ ಸಮಯದಲ್ಲಿ ಹೆಚ್ಚು ಮಾರ್ಕ್ಸ್ ತೆಗೆಯಬೇಕು ಎಂಬ ಸಲುವಾಗಿ ಕಷ್ಟಪಟ್ಟು ಓದುತ್ತಾರೆ. ಆದರೆ ಪರೀಕ್ಷೆಯಲ್ಲೇನಾದರೂ ಯಡವಟ್ಟಾದರೆ ಮಕ್ಕಳ ಭವಿಷ್ಯವೇ ಅತಂತ್ರ ಸ್ಥಿತಿಗೆ ಸಿಲುಕಿ ಬಿಡುತ್ತದೆ. ಈ ವಿಚಾರದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿರುತ್ತದೆ. ಆದ್ರೆ ಶಿಕ್ಷಕರೇ ಯಡವಟ್ಟು ಮಾಡಿದರೆ. ದಾವಣಗೆರೆ ವಿವಿಯಲ್ಲಿ ಯಡವಟ್ಟು ಆಗಿ, ಬಿಕಾಂ ಪರೀಕ್ಷೆಯನ್ನು ಮುಂದೂಡಲಾಗಿದೆ.
ದಾವಣಗೆರೆ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ನಡೆದ ಬಿಕಾಂನ ಇ-ಕಾಮರ್ಸ್ ಪರೀಕ್ಷೆಯಲ್ಲಿ ಯಡವಟ್ಟಾಗಿದೆ. ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಕೊಡುವ ಬದಲು ಉತ್ತರ ಇರುವ ಪತ್ರಿಕೆಯನ್ನು ನೀಡಲಾಗಿದೆ. ಆರನೇ ಸೆಮಿಸ್ಟರ್ ಅಂದ್ರೆ ಕೊನೆಯ ಸೆಮಿಸ್ಟರ್ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಈ ರೀತಿ ಯಡವಟ್ಟು ಮಾಡಿದ್ದಾರೆ. ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಮೌಲ್ಯಮಾಪಕರುಗಳಿಗೆ ನೀಡುವ ಪತ್ರಿಕೆಯನ್ನು ನೀಡಿದ್ದಾರೆ.
ಉತ್ತರ ಪತ್ರಿಕೆಗಳನ್ನು ನೋಡಿದ ವಿದ್ಯಾರ್ಥಿಗಳು ದಂಗಾಗಿದ್ದಾರೆ. ವಿವಿ ವ್ಯಾಪ್ತಿಯಲ್ಲಿ ಬರುವ 60 ಕಾಲೇಜುಗಳ ಪೈಕಿ 15 ಕಾಲೇಜುಗಳಿಗೆ ಪರೀಕ್ಷೆಯಲ್ಲಿ ಈ ತೊಂದರೆ ಎದುರಾಗಿದೆ. ಈ ಹಿನ್ನೆಲೆ ದಾವಣಗೆರೆ ವಿವಿ ಕುಲಸಚಿವ ರಮೇಶ್ ಅವರು ಪರೀಕ್ಷೆಯನ್ನು ಮುಂದೂಡಿದ್ದಾರೆ. 2017ರಲ್ಲೂ ಬಿಎ ಪದವಿಯ ಮೂರನೇ ಸೆಮಿಸ್ಟರ್ ನ ಸಮಾಜಶಾಸ್ತ್ರ ಪ್ರಶ್ನೆ ಪತ್ರಿಕೆ ಅದಲು ಬದಲು ಆಗಿತ್ತು. ಅಂದು ಕೂಡ ಪರೀಕ್ಷಾ ಸಿಬ್ಬಂದಿಗಳ ಯಡವಟ್ಟಿನಿಂದಾಗಿ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದ್ದರು. ಇದೀಗ ಮತ್ತೊಮ್ಮೆ ಅಂಥದ್ದೇ ಯಡವಟ್ಟು ಮಾಡಿದೆ.