ಸಾಣೇಹಳ್ಳಿ, (ನವೆಂಬರ್.19) ಪ್ರಧಾನಿ ನರೇಂದ್ರ ಮೋದಿಯವರು ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ದೆಹಲಿಯಲ್ಲಿ ಕಳೆದ ಹದಿನಾಲ್ಕು ತಿಂಗಳಿನಿಂದಲೂ ರೈತರು ಮಳೆ, ಚಳಿ, ಬಿಸಿಲೆನ್ನದೆ ಹಗಲಿರುಳು ಹೋರಾಡುತ್ತಿದ್ದರು. ಅವರ ಹೋರಾಟವನ್ನು ಬೆಂಬಲಿಸಿ ನಾವು ಸಹ ಹೇಳಿಕೆ ಕೊಟ್ಟಿದ್ದೆವು. ಗುರುನಾನಕ್ ಜನ್ಮ ಜಯಂತಿಯ ಇಂದು ಅವುಗಳನ್ನು ವಾಪಾಸ್ ಪಡೆದಿರುವುದಾಗಿ ಪ್ರಧಾನಮಂತ್ರಿಗಳು ಘೋಷಿಸಿರುವುದಕ್ಕಾಗಿ ಅವರನ್ನು ಅಭಿನಂದಿಸಬಯಸುತ್ತೇವೆ.
ಇಲ್ಲಿ ಸೋಲು-ಗೆಲವಿಗಿಂತ ಒಬ್ಬ ಜನಪರ ಕಾಳಜಿಯ ನೇತಾರನ ಕಳಕಳಿ ಇದೆ ಎನ್ನಿಸುವುದು. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ತೀರ್ಮಾನ ಯೋಗ್ಯವಾಗಿದೆ. ಜೊತೆಗೆ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ, ನೀರು, ವಿದ್ಯುತ್ ನೀಡುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೂಕ್ತ ನೀತಿ ನಿರೂಪಣೆಗಳನ್ನು ಜಾರಿಗೊಳಿಸಿ ರೈತರ ಬದುಕು ಸಂತಸದಾಯಕವಾಗುವಂತೆ ಕ್ರಮಕೈಗೊಳ್ಳಬೇಕೆಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಕರೆ ಕೊಟ್ಟರು.