ಬೆಂಗಳೂರು: ಬಾರೀ ಭೂ ಕುಸಿತದಿಂದಾಗಿ ಕೇರಳದ ವಯನಾಡು ಸ್ಮಶಾನದಂತೆ ಆಗಿದೆ. ಅಲ್ಲಿ ವಾಸವಿದ್ದ ಮನುಷ್ಯರ್ಯಾರು ಜೀವಂತ ಉಳಿದಿಲ್ಲ. ಮನೆಗಳ ಪಳೆಯುಳಿಕೆಗಳು ಕಾಣಿಸುತ್ತಿಲ್ಲ. ಎಲ್ಲಿ ನೋಡಿದರು ನದಿಯಂತೆ ನೀರು ಹರಿಯುತ್ತಿದೆ, ಇನ್ನೆಲ್ಲಿಂದಲೋ ಮರಗಳು, ಕಾರುಗಳು ಕೊಚ್ಚಿಕೊಂಡು ಬರುತ್ತಿವೆ. ಇಂದಿಗೂ ನಾಪತ್ತೆಯಾದವರ ಹುಡುಕಾಟ ನಡೆಯುತ್ತಿದೆ. ಅಲ್ಲಿನ ದೃಶ್ಯ ಕಂಡವರಲ್ಲಿ ಮುಂದಿನ ಜೀವನ ಹೇಗೆ ಎಂಬ ಪ್ರಶ್ನೆ ಕಾಡದೆ ಇರುವುದಿಲ್ಲ. ಬದುಕುಳಿದವರ ಬದುಕು ಹೇಗೆ ಎಂಬುದು ಅರ್ಥವಾಗದೆ ಕಂಗಾಲಾಗಿದ್ದಾರೆ. ಅಂಥವರಿಗೆ ಆಶ್ರಯವಾಗಲು ಸಿಎಂ ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ.
ವಯನಾಡಿನ ಸಂತ್ರಸ್ಥರಿಗೆ 100 ಮನೆಗಳನ್ನು ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ. ಕರ್ನಾಟಕ ಸರ್ಕಾರದಿಂದ ಮನೆಗಳ ನಿರ್ಮಾಣದ ಭರವಸೆ ನೀಡಿರುವ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ‘ವಯನಾಡಿಲ್ಲಿ ಭೂಕುಸಿತದಿಂದಾಗಿ ತತ್ತರಿಸಿರುವ ಕೇರಳದ ಜೊತೆಗೆ ರಾಜ್ಯ ಸರ್ಕಾರ ನಿಂತಿದೆ. ಭೂಕುಸಿತದಿಂದಾಗಿ ಸೂರು ಕಳೆದುಕೊಂಡ 100 ಕುಟುಂಬಗಳಿಗೆ ನಮ್ಮ ಸರ್ಕಾರ ಮಾನವೀಯತೆ ನೆಲೆಯಲ್ಲಿ ಮತ್ತೆ ಮನೆ ನಿರ್ಮಿಸಿಕೊಡಲಿದೆ ಎಂಬ ಭರವಸೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೀಡಿದ್ದೇನೆ. ಸಂಕಷ್ಟದ ಕಾಲದಲ್ಲಿ ಜೊತೆಗೆ ನಿಂತು ಭರವಸೆಯನ್ನು ಮರಳಿ ಕಟ್ಟೋಣಾ’ ಎಂದು ಟ್ವೀಟ್ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಈ ನಿರ್ಧಾರ ಹೈಕಮಾಂಡ್ ನಾಯಕರಿಗೂ ತಲುಪಿದೆ. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಕೇರಳ ಜನರ ಸಂಕಷ್ಟಕ್ಕೆ ಸ್ಪಂದಿಸಿದ ನಿಮ್ಮ ಸ್ಪಂದನೆಗೆ ನಮನ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಧನ್ಯವಾದ ತಿಳಿಸಿದ್ದಾರೆ.