ಬೆಂಗಳೂರು: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಈ ಪಾದಯಾತ್ರೆ ಬಗ್ಗೆ ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್, ರಾಜ್ಯದಲ್ಲಿ ಇನ್ಮೇಲೆ ನಮಗೆ ಸ್ಥಾನ ಇಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್ ಗೆ ಗೊತ್ತಾಗಿದೆ. ಇಲ್ಲಸಲ್ಲದ ಆಪಾದನೆಗಳನ್ನು ಕೂಡಿ ಹಾಕಿಕೊಂಡು, ಜೆಡಿಎಸ್ ಹಾಗೂ ಬಿಜೆಪಿ ನಮ್ಮ ಮೇಲೆ ಆಪಾದನೆ ಮಾಡಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಮೊದಲು ನಮ್ಮ ಜೊತೆಗೂ ಸೇರಿಕೊಂಡಿದ್ದರು. ನಮ್ಮ ಜೊತೆಗೆ ಸೇರಿಕೊಂಡ 14 ತಿಂಗಳಲ್ಲಿಯೇ ಅವರೇ ಮಾಡಿಕೊಂಡ ತಪ್ಪನಿಂದ ಅಧಿಕಾರ ಬಿಟ್ಟು ಹೋದರು. ಈಗ ಬಿಜೆಪಿ ಸೇರಿಕೊಂಡಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ ಅವಕಾಶ ಬೇರೆ ಸಿಕ್ಕಿದೆ. ಭಾರತೀಯ ಜನತಾ ಪಾರ್ಟಿಗೆ ಶೀಘ್ರವೇ ಕುಮಾರಸ್ವಾಮಿ ಏನು ಎಂಬುದು ಗೊತ್ತಾಗುತ್ತದೆ. ಈಗಾಗಲೇ ಗೊತ್ತಾಗಿದೆ ಎಂಬುದಕ್ಕೆ ನಿನ್ನೆ ನಡೆದ ಬೆಳವಣಿಗೆಯೇ ಸಾಕ್ಷಿ. ಬಿಜೆಪಿಯ ಹಲವು ನಾಯಕರು ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ನಾನೀಗ ದಾರಿಯಲ್ಲಿ ಬರುವಾಗ ನೋಡಿದೆ. ಎಲ್ಲಾ ಕಡೆ ಬಿಜೆಪಿಯ ಪಕ್ಷದ್ದೇ ಬ್ಯಾನರ್ ಗಳು, ಜೆಡಿಎಸ್ ಪಕ್ಷದ ಒಂದು ಬ್ಯಾನರ್ ಕೂಡ ಕಂಡಿಲ್ಲ.
ಇದನ್ನ ನೋಡಿದಾಗ ಅರ್ಥ ಮಾಡಿಕೊಳ್ಳಬೇಕು. ನೀವೇನು ಮದುವೆ ಮಾಡಿಕೊಂಡಿದ್ದೀರಿ. ಅದು ಹೆಚ್ಚು ದಿನ ನಡೆಯುವುದಿಲ್ಲ. ಡಿವೋರ್ಸ್ ಬಹಳ ಬೇಗ ಆಗುತ್ತದೆ. ಬಹಳ ಅಂದ್ರೆ ಬಹಳ ಬೇಗ ಆಗುತ್ತದೆ. ಇಂಥ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಕುಮಾರಸ್ವಾಮಿ ಮೇಕೆ ಗರಂ ಆಗಿದ್ದಾರೆ.