ಬೆಂಗಳೂರು: ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣದಲ್ಲಿ ಯಡಿಯೂರಪ್ಪ ಅವರಿಗೆ ಹಳೆಯ ವಿನಾಯ್ತಿಯನ್ನೇ ಮುಂದುವರೆಸಿದೆ. ಈ ಮೂಲಕ ಬಂಧನ ಭೀತಿಯಿಂದ ಬಿಎಸ್ವೈ ಮುಕ್ತಿ ಪಡೆದಿದ್ದಾರೆ. ಜೊತೆಗೆ ಯಡಿಯೂರಪ್ಪ ಅವರು ವಿಚಾರಣೆಗೂ ಖುದ್ದು ಹಾಜರಾಗಬೇಕಿಲ್ಲ. ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚರಾಣೆ ನಡೆಸಿದ, ನ್ಯಾಯಮೂರ್ತಿ ಎಂ.ನಾಗ ಪ್ರಸನ್ನ ಅವರಿದ್ದ ಪೀಠವೂ ಈ ಆದೇಶ ಹೊರಡಿಸಿದೆ.
ಇನ್ನು ಇದೇ ವೇಳೆ ಅರ್ಜಿದಾರರ ಪರ ವಕೀಲರು ಅರ್ಜಿ ತಿದ್ದುಪಡಿಗಾಗಿ ಮನವಿ ಮಾಡಲಾಗಿದೆ. ಸರ್ಕಾರದಿಂದ ಇದಕ್ಕೆ ಆಕ್ಷೇಪ ಇಲ್ಲದೆ ಇದ್ದಲ್ಲಿ ಕಾಲಾವಕಾಶ ನೀಡಬೇಕೆಂದು ಕೋರಿದ್ದಾರೆ. ಇದಕ್ಕೆ ಪೀಠ ಸರ್ಕಾರಿ ವಕೀಲರನ್ನು ಪ್ರಶ್ನಿಸಿದೆ. ಅರ್ಜಿ ತಿದ್ದುಪಡಿಗೆ ಆಕ್ಷೇಪವಿಲ್ಲವೇ ಎಂದು ಕೇಳಿದೆ. ಸರ್ಕಾರಿ ವಕೀಲರು ಆಕ್ಷೇಪವಿಲ್ಲ ಎಂದು ಕೋರ್ಟ್ ಗೆ ಉತ್ತರ ನೀಡಿದ್ದಾರೆ. ಯಡಿಯೂರಪ್ಪ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಸಂತ್ರಸ್ತೆಯ ಪರ ವಕೀಲರು ಕೋರಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ಆಗಸ್ಟ್ 22ಕ್ಕೆ ಮುಂದೂಡಿದೆ.
ಮಾರ್ಚ್ 3ರಂದು ಅಪ್ರಾಪ್ತೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಕೇಸ್ ದಾಖಲಾಗಿತ್ತು. ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿತ್ತು. ಸಿಐಡಿಗಳು ಯಡಿಯೂರಪ್ಪ ಅವರಿಗೆ ನೋಟೀಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗಿ, ಹೇಳಿಕೆಗಳನ್ನು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಸದ್ಯಕ್ಕೆ ದೂರು ಸಲ್ಲಿಸಿದ ಮಹಿಳೆ ಸಾವನ್ನಪ್ಪಿದ್ದಾರೆ.