ಪ್ರಧಾನಿ ಮೋದಿ ಭೇಟಿಯಾದ ಡಿಕೆಶಿ : ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ಹಲವು ಯೋಜನೆಗಳ ಕುರಿತು ಚರ್ಚೆ

2 Min Read

ಸುದ್ದಿಒನ್, ನವದೆಹಲಿ, ಜುಲೈ.31 : ಬೆಂಗಳೂರು ನಗರದ ಯೋಜನೆಗಳಿಗೆ ಬೆಂಬಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಯಾವುದೇ ಅನುದಾನವನ್ನು ಘೋಷಿಸದ ಕಾರಣ ನಾನು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದೇನೆ.

ನೀರಾವರಿ  ಕ್ಷೇತ್ರಗಳಿಗೂ ಯಾವುದೇ ಹಣವನ್ನು ಮೀಸಲಿಟ್ಟಿಲ್ಲ. ಬಜೆಟ್ ನಲ್ಲಿ ಘೋಷಿತ ಮೊತ್ತವನ್ನೂ ನೀಡಿಲ್ಲ. ಬೆಂಗಳೂರು ನಗರದಲ್ಲಿ ಆರಂಭವಾಗಲಿರುವ ಹೊಸ ಯೋಜನೆಗಳಿಗೆ ಅನುದಾನ ನೀಡುವಂತೆ ಪ್ರಧಾನಿಯವರನ್ನು ಒತ್ತಾಯಿಸಿದ್ದೇನೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿ ಮಾಡುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಆ ತೆರಿಗೆಯಲ್ಲಿ ಬೆಂಗಳೂರು ಹೆಚ್ಚು ಕೊಡುಗೆ ನೀಡುತ್ತಿದೆ ಎಂದು ವಿವರಿಸಿದ್ದೇನೆ.

ಅದನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರದ ಮಾದರಿಯಲ್ಲಿ ಕರ್ನಾಟಕದ ಹಿತಾಸಕ್ತಿಗಳನ್ನು ಪರಿಗಣಿಸುವಂತೆ ಪ್ರಧಾನಿ ಮೋದಿ ಅವರನ್ನು ಕೋರಿದ್ದೇನೆ. ಸಿಗ್ನಲ್‌ ರಹಿತ ಕಾರಿಡಾರ್‌, ಫ್ಲೈಓವರ್‌ಗಳನ್ನು ನೀಡುವಂತೆ ನಾನು ಕೇಳಿದ್ದು, ಅವುಗಳನ್ನು ಪರಿಗಣಿಸುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.

ಕಳೆದ ವರ್ಷದ ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಮೀಸಲಾಗಿಟ್ಟ 5,300 ಕೋಟಿ ಅನುದಾನದ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಈ ವಿಷಯವನ್ನು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ತರುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದರು. ಹಣಕಾಸು ಆಯೋಗದಿಂದಲೂ ರಾಜ್ಯಕ್ಕೆ ಹಣ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.

ಈ ಹಿಂದೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೆಬ್ಬಾಳ (ವಿಮಾನ ನಿಲ್ದಾಣ) ಮತ್ತು ಬೆಂಗಳೂರಿನ ನೆಲಮಂಗಲ ಮೇಲ್ಸೇತುವೆ ಸೇರಿದಂತೆ ಮೂರು ಪ್ರಮುಖ ಮೇಲ್ಸೇತುವೆಗಳಂತಹ ಹಲವಾರು ಪ್ರೋತ್ಸಾಹಕಗಳನ್ನು ರಾಜ್ಯಕ್ಕೆ ನೀಡಲಾಯಿತು. ಆದರೆ, ಈ ಬಾರಿ ಏನನ್ನೂ ನೀಡಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ಹೇಳಿದರು.

ಬಿಜೆಪಿ ನಾಯಕರ ಪಾದಯಾತ್ರೆ ಬಗ್ಗೆಯೂ ಮಾತನಾಡಿದ್ದಾರೆ. ಮೂಡಾ ಹಗರಣ ವಿರೋಧಿಸಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ಶನಿವಾರ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಆದರೆ ಈ ಪಾದಯಾತ್ರೆಗೆ ನಮ್ಮ‌ ಬೆಂಬಲವಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ‌.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಪಾದಯಾತ್ರೆ ಬಗ್ಗೆ ಗೊತ್ತಿಲ್ಲ. ಆ ಬಗ್ಗೆ ಇಲ್ಲಿ ಮಾತನಾಡುವುದಿಲ್ಲ, ಬೆಂಗಳೂರಿನಲ್ಲಿ ಮಾತನಾಡುತ್ತೇನೆ. ಅವರು ಎನ್ಡಿಎ ನಾವೂ ಇಂಡಿಯಾ. ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ ಎಂದು ಹೇಳಿ ಹೊರಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *