ಸುದ್ದಿಒನ್, ಹಿರಿಯೂರು, ಜುಲೈ. 30 : ತಾಲೂಕಿನ ಮಸ್ಕಲ್ ಗ್ರಾಮದ ಗ್ರಾಮ ದೇವತೆ ಶ್ರೀ ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವ ಸರಳವಾಗಿ ನಡೆಯಿತು. ಪ್ರತಿ ವರ್ಷ ಆಷಾಡ ಮಾಸದಲ್ಲಿ ಈ ಜಾತ್ರೆಯನ್ನು ಆಚರಿಸಲಾಗುತ್ತದೆ. ಮೂರು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಜಾತ್ರೆ ನಡೆಸಲು ದೇವಾಲಯ ಕಮಿಟಿ ಮತ್ತು ಗ್ರಾಮಸ್ಥರು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಮೂರು ವರ್ಷಕ್ಕೊಮ್ಮೆ ಜಾತ್ರೆ ದೊಡ್ಡದಾಗಿ ನಡೆಯಲಿದೆ.
ಕಳೆದ ಬಾರಿ ಮತ್ತು ಈ ಭಾರಿ ಸರಳವಾಗಿ ಜಾತ್ರೆ ನಡೆಯಿತು. ಜಾತ್ರೆ ಅಂಗವಾಗಿ ದೇವಿಗೆ ಅಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕುಂಕುಮಾರ್ಚನೆ, ಬಿಲ್ವಾರ್ಚನೆ ಸೇರಿದಂತೆ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಪೂಜೆ ಅಂಗವಾಗಿ ಮಸ್ಕಲ್, ಟಿಬಿ ಗೊಲ್ಲರಹಟ್ಟಿ, ಚಿತ್ರದೇವರಹಟ್ಟಿ, ಮಲ್ಲೇಣು, ದೇವಿ ಕಾಲೋನಿ, ಪುಟ್ಟಯ್ಯನಕಟ್ಟೆ ಗ್ರಾಮಸ್ಥರು ತಂಡೋಪತಂಡವಾಗಿ ಕುಟುಂಬದ ಸದಸ್ಯರೊಂದಿಗೆ ಬಂದು ಪೂಜೆ ಸಲ್ಲಿಸಿದರು. ಇದೇ ವೇಳೆ ಮಹಿಳೆಯರು ದೇವಿಗೆ ತಂಬಿಟ್ಟಿನ ಆರತಿ ಬೆಳಗಿದರು. ತಾಲೂಕಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ದೇವಾಲಯದ ಆರ್ಚಕ ಸೋಮಶೇಖರ್, ಮಸ್ಕಲ್
ಪರಮೇಶ್, ಭೀಮಣ್ಣ, ಚೇತನ್, ಸಂಜೇಶ್ ಸಾಗರ್, ಮಾರುತಿ, ಚಿರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪೂಜೆಯಲ್ಲಿ ಭಾಗವಹಿಸಿದ್ದರು.