ಸುದ್ದಿಒನ್, ಗುಬ್ಬಿ, ಜುಲೈ.29 : ಮೂಲ ಸಂಸ್ಕೃತಿ ಮತ್ತು ಜಾನಪದವನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಹ ಕೆಲಸವನ್ನು ನಾವೆಲ್ಲರೂ ಸಹ ಮಾಡಬೇಕು ಎಂದು ಬೆಳ್ಳಾವಿಯ ಕಾರದಮಠದ ವೀರಬಸವ ಸ್ವಾಮೀಜಿ ತಿಳಿಸಿದರು.
ಗುಬ್ಬಿ ಪಟ್ಟಣದ ಎಸ್ಎಮ್ ಪ್ಯಾಲೇಸ್ ನಲ್ಲಿ ತುಮಕೂರು ಜಿಲ್ಲಾ ಜಾನಪದ ಕಲಾಸಂಘ ಭೀಮಸಂದ್ರ ವತಿಯಿಂದ ನಡೆದ ಗುಬ್ಬಿ ಜಾನಪದ ಕಲಾ ಉತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಪುರಾತನ ಕಾಲದಿಂದ ನಡೆದುಕೊಂಡು ಬಂದಿರುವಂತಹ ಸೋಮನ ಕುಣಿತ, ವೀರಭದ್ರನ ಕುಣಿತ, ಗೀಗಿ ಪದ, ಸೇರಿದಂತೆ ಹತ್ತು ಹಲವು ಜಾನಪದ ಕಲೆಗಳು ನಮ್ಮಲ್ಲಿ ಇದ್ದು ಅವು ಇತ್ತೀಚಿಗೆ ನವೀನ ಯುಗ ಹೆಚ್ಚುತ್ತಿರುವುದರಿಂದ ಮರೆಯಾಗುತ್ತಿವೆ, ಅಂತಹ ಕಲೆಗಳನ್ನು ಮತ್ತೆ ಉಳಿಸಿ ಬೆಳೆಸುವಂತಹ ಕೆಲಸವನ್ನು ಎಲ್ಲರೂ ಸೇರಿ ಮಾಡಬೇಕು ಎಂದು ತಿಳಿಸಿದರು.
ಜಾನಪದ ವಿದ್ವಾಂಸ ಡಾ. ಕಂಟಲಗೆರೆ ಸಣ್ಣಹೊನ್ನಯ್ಯ ಮಾತನಾಡಿ ಜಾನಪದ ಕಲಾವಿದರನ್ನು ಪೋಷಿಸುವಂತಹ ಕೆಲಸವನ್ನು ಸರಕಾರಗಳು ಮಾಡುತ್ತಿಲ್ಲ, ಅವರಿಗೆ ನೀಡಬೇಕಾದಂತಹ ಸೌಲಭ್ಯಗಳು ಸಹ ಸರಕಾರದ ವತಿಯಿಂದ ಸರಿಯಾದ ರೀತಿಯಲ್ಲಿ ಸಿಗದೇ ಇರುವುದರಿಂದ ಇತ್ತೀಚಿನ ದಿನಗಳಲ್ಲಿ ನಮ್ಮ ಸಾಂಸ್ಕೃತಿಕ, ಜಾನಪದ ಕಲೆಗಳು ಕಣ್ಮರೆಯಾಗುತ್ತಿರುವುದು ವಿಷಾಧನೀಯ ಎಂದು ತಿಳಿದರು.
ಇದೇ ಸಂದರ್ಭದಲ್ಲಿ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಆವರಣದಿಂದ ವೀರಭದ್ರನ ಕುಣಿತ, ತಮಟೆ, ಡೋಲು, ಸೋಮನ ಕುಣಿತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ ಮೆರವಣಿಗೆಯ ಮೂಲಕ ಕರೆ ತರಲಾಯಿತು.
ಕಾರ್ಯಕ್ರಮದಲ್ಲಿ ಬೆಟ್ಟದ ಹಳ್ಳಿಯ ಚಂದ್ರಶೇಖರ ಮಹಾ ಸ್ವಾಮೀಜಿ, ಗೊಲ್ಲಹಳ್ಳಿಯ ವಿಭವ ವಿದ್ಯಾಶಂಕರ ಸ್ವಾಮೀಜಿ,ಗೌರವ ಅಧ್ಯಕ್ಷರವಿರಾಜ್, ಚಿಕ್ಕಹುಂಡಯ್ಯ,ಉಪಾಧ್ಯಕ್ಷ ಶಾಂತ ಲಿಂಗಯ್ಯ, ಗಂಗಾಧರಯ್ಯ, ರುದ್ರೇಶ್, ಆದರ್ಶ, ಛಲವಾದಿ ಮಹಾಸಭಾ ತಾಲೂಕ ಅಧ್ಯಕ್ಷ ಈರಣ್ಣ ಟಿ. ಮಧು ಕೆ ಸೇರಿದಂತೆ ಇನ್ನಿತರರು ಹಾಜರಿದ್ದರು.