ಸುದ್ದಿಒನ್, ಚಿತ್ರದುರ್ಗ, ಜುಲೈ. 29 : ತಿರ್ಕೊಂಡ್ ಬಂದು ಕರ್ಕೊಂಡ್ ಉಣ್ಣುದೋ ಎಂಬ ಹಿರಿಯರ ಗಾದೆ ಮಾತಿನಂತೆ ಬೇಡಿಕೊಂಡು ಬಂದ ಭಿಕ್ಷೆಯನ್ನು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸುವುದು ಬೇಡಜಂಗಮ ಸಮಾಜದ ಸೇವೆ ಶ್ಷಾಘನೀಯ. ಬೇಡಜಂಗಮರು ವಿಚಾರವಂತರು, ಜ್ಞಾನದಾಸೋಹಿಗಳು ಇವರ ಪ್ರೋತ್ಸಾಹದಿಂದ ಅನೇಕ ವಿದ್ಯಾರ್ಥಿಗಳು ಮಠಮಾನ್ಯಗಳ ಪ್ರಸಾದ ನಿಲಯಗಳಲ್ಲಿ ವ್ಯಾಸಂಗ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಹೊಂದಿದ್ದಾರೆ ಎಂದು ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಜುಲೈ 28ರಂದು ಭಾನುವಾರ ಹೊಳಲ್ಕೆರೆ ರಸ್ತೆಯಲ್ಲಿರುವ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಜಿಲ್ಲಾ ಬೇಡಜಂಗಮ ಸಮಾಜ ಸಂಸ್ಥೆ ಮತ್ತು ತಾಲ್ಲೂಕು ಬೇಡ ಜಂಗಮ ಸಮಾಜಗಳು ಚಿತ್ರದುರ್ಗ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ 2023-24ನೇ ಸಾಲಿನ ಜಿಲ್ಲಾ ಪ್ರತಿಭಾ ಪುರಸ್ಕಾರ ಮತ್ತು ಶಿಷ್ಯ ವೇತನ ವಿತರಣಾ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
ಪ್ರತಿಭಾ ಪುರಸ್ಕಾರ ಮಾಡುವವರೂ ಶ್ರೀಮಂತರಲ್ಲ, ತೆಗೆದುಕೊಳ್ಳುವವರೂ ಶ್ರೀಮಂತರಲ್ಲ. ಜಂಗಮತ್ವದ ಸಂಸ್ಕಾರದಿಂದ ಜಂಗಮರನ್ನು ಗುರುಸ್ಥಾನದಲ್ಲಿಟ್ಟ ಕೀರ್ತಿ ಸಮಸ್ತ ಸಮುದಾಯರಿಗೆ ಸಲ್ಲುತ್ತದೆ. ಜಂಗಮರ ಸಂಸ್ಕಾರವನ್ನು ಗೌರವಿಸಿ ಪೂಜ್ಯಭಾವನೆ ಹೊಂದಬೇಕು. ಸಮಾಜದ ಋಣ ನಮ್ಮ ಮೇಲಿದೆ ಸಮಾಜದವರು ನಮ್ಮನ್ನು ಜೊತೆಮಾಡಿಕೊಂಡು ಮುಂದೆ ಸಾಗುತ್ತಾರೆ, ಗೌರವಿಸುತ್ತಾರೆ ಎಂಬ ಜಯದೇವ ಜಗದ್ಗುರುಗಳ ವಾಣಿಯಂತೆ ಸರ್ವರಿಗೂ ಸಮಪಾಲು ಸಮಬಾಳು ಎಂಬಂತೆ ಒಟ್ಟಾಗಿ ಕಾಯಕವ ಮಾಡಿ ನೆಮ್ಮದಿಯಿಂದ ಆರೋಗ್ಯವಂತರಾಗಿ ಬಾಳಬೇಕು ಎಂದರು.
ವಿಧಾನ ಪರಿಷತ್ತಿನ ಸದಸ್ಯ ಕೆ.ಎಸ್.ನವೀನ್ ಉದ್ಘಾಟಿಸಿ ಮಾತನಾಡಿ ಗುರುವಿನ ಸ್ಥಾನದಲ್ಲಿರುವ ಸಮಾಜ ಬೇಡಜಂಗಮ ಸಮಾಜ. ವಿದ್ಯೆ ಎಂಬ ಚೈತನ್ಯವನ್ನು ಹುಟ್ಟಿನಿಂದಲೇ ಬೆಳೆಸಿಕೊಂಡು ಬಂದಿದೆ. ಪ್ರತಿಯೊಬ್ಬರ ಸಾಧನೆಯ ಹಿಂದೆ ಜಂಗಮ ಸಮಾಜದ ಪರಿಶ್ರಮವಿದೆ. ಅಂಕಪಟ್ಟಿ ಪಡೆದ ನಂತರದ ಜೀವನದಲ್ಲಿ ಸಾಧಿಸುವುದು ನಿಜವಾದ ಅಂಕಪಟ್ಟಿಯಾಗಿದೆ. ಜೀವನದ ಅನುಭವದ ಅಂಕಪಟ್ಟಿಯ ಬಗ್ಗೆ ಉತ್ತಮ ನಿರೀಕ್ಷೆ ಕಾಣಬೇಕು ಎಂದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅತಿಥಿಯಾಗಿ ಮಾತನಾಡಿ ಜಂಗಮ ಸಂಸ್ಕೃತಿಯನ್ನು ಗೌರವಿಸುವುದು ಕಡಿಮೆಯಾಗುತ್ತಿದೆ. ಮೀಸಲಾತಿ ಹೋರಾಟ ನಿರಂತರವಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಮಠಮಾನ್ಯಗಳು ವಿದ್ಯಾದಾನ ಮಾಡುತ್ತಾ ಬಂದಿದೆ. ದೇಶವಿದೇಶಗಳಲ್ಲಿ ಅಭ್ಯಾಸ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ಹಲವಾರು ಅನುದಾನ ಪ್ರೋತ್ಸಾಹದ ಮಾರ್ಗಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ತಂದೆ ತಾಯಿಯರನ್ನು ಗೌರವಿಸುವ ಮತ್ತು ಪ್ರೀತಿಸುವ ಗುಣಗಳನ್ನು ಮಕ್ಕಳಲ್ಲಿ ಬಿತ್ತಬೇಕು ಎಂದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ ಜಂಗಮರು ನಿತ್ಯವೂ ಚಲನಶೀಲರು. ವಿದ್ಯೆ, ದಾಸೋಹದ ಪರಿಕಲ್ಪನೆಯನ್ನು ನಾಡಿಗೇ ಕೊಡುಗೆಯಾಗಿ ನೀಡಿದವರು ಎಂದರು.
ಬೇಡಜಂಗಮ ಸಮಾಜದ ಜಿಲ್ಲಾದ್ಯಕ್ಷ ಸೋಮಶೇಖರ ಮಂಡಿಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬೇಡಜಂಗಮ ಸಮಾಜದ ಕಾರ್ಯಾಧ್ಯಕ್ಷ ಎಂ.ಟಿ.ಮಲ್ಲಿಕಾರ್ಜುನಸ್ವಾಮಿ, ಅಖಿಲ ಭಾರತ ಬೇಡಜಂಗಮ ಸಮಾಜದ ಕಾರ್ಯಧ್ಯಕ್ಷ ಹಾಗೂ ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್, ಖಜಾಂಚಿ ಕೆ.ಎಸ್.ಶಿವನಗೌಡ್ರು, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮಹಡಿಶಿವಮೂರ್ತಿ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಜೆ.ಶಿವಪ್ರಕಾಶ್, ಶಿವಸಿಂಪಿ ಸಮಾಜದ ಜಿಲ್ಲಾಧ್ಯಕ್ಷ ಇ.ಎಸ್. ಜಯದೇವಮೂರ್ತಿ, ಹೇಮರೆಡ್ಡಿ ಮಲ್ಲಮ್ಮ ಸಮಾಜದ ದಯಾನಂದ, ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಡಿ.ಎಸ್.ಸುರೇಶ್‌ಬಾಬು, ಸಾಧು ಸದ್ಧರ್ಮ ವೀರಶೈವ ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಎಂ.ಬಿ.ಚನ್ನಬಸವನಗೌಡ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಕೆ.ಸಿ.ಗಂಗಾಧರಪ್ಪ, ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಟೇಲ್ ಶಿವಕುಮಾರ್, ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ವಿಜಯ್‌ಕುಮಾರ್, ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಕೆ.ಪ್ರಭುದೇವ್, ವೀರಶೈವ ಸಮಾಜದ ಖಜಾಂಚಿ ಕೆ.ಎಂ.ತಿಪ್ಪೇಸ್ವಾಮಿ, ಬೇಡಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷ ಜಿ.ಎಸ್.ಕಲ್ಲೇಶಯ್ಯ, ಹೊಸದುರ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕಧ್ಯಕ್ಷ ಕೆ.ಎಸ್.ಕಲ್ಮಠ್, ಹೊಳಲ್ಕೆರೆ ಬೇಡಜಂಗಮ ಸಮಾಜದ ತಾಲ್ಲೂಕಧ್ಯಕ್ಷ ಹೆಚ್.ಪ್ರಭುಲಿಂಗಯ್ಯ, ಹಿರಿಯೂರು ಬೇಡ ಜಂಗಮ ಸಮಾಜದ ತಾಲ್ಲೂಕಧ್ಯಕ್ಷ ಸಿ.ಎಂ.ಸ್ವಾಮಿ, ಮೊಳಕಾಲ್ಮೂರು ಬೇಡಜಂಗಮ ಸಮಾಜದ ತಾಲ್ಲೂಕಧ್ಯಕ್ಷ ಟ.ಶಿವಣ್ಣ, ಹಿರಿಯರಾದ ಕರಿಸಿದ್ದಯ್ಯ, ಸೋಮಶೇಖರಯ್ಯ ಮುಂತಾದವರು ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಬಿಎಂ ಸೃಷ್ಠಿ ಮತ್ತು ಬಿಎಂ ಸಿಂಧು ಸ್ವಾಗತ ನೃತ್ಯ ಮಾಡಿದರು. ದೇವೀರಮ್ಮ ಮತ್ತು ಸುಮ ಪ್ರಾರ್ಥಿಸಿದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಸ್ವಾಗತಿಸಿದರು. ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿದ 21 ಎಸ್‌ಎಸ್‌ಎಲ್‌ಸಿ, 18 ಪಿಯುಸಿ, 03 ಪಿಹೆಚ್‌ಡಿ ಪದವಿ ಪಡೆದ ಸಂಶೋಧನಾರ್ಥಿಗಳಿಗೆ ಹಾಗೂ 03 ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ನಿವೃತ್ತ ಪ್ರಾಚಾರ್ಯ ಹಾಗೂ ಬೇಡಜಂಗಮ ಸಮಾಜ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಷಡಾಕ್ಷರಯ್ಯ ಪ್ರಾಸ್ತಾವಿಕ ನುಡಿದರು. ಬಸವರಾಜ ಶಾಸ್ತಿç ವೇದಘೋಷ ಮಾಡಿದರು. ಕನ್ನಡ ಶಿಕ್ಷಕಿ ಪಿ.ಚಿನ್ನಾಂಬೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾವಿಕಾಸ ವಿದ್ಯಾಸಂಸ್ಥೆಯ ಪ್ರಾಚಾರ್ಯ ಪಿ.ಬಸವರಾಜಯ್ಯ ವಂದಿಸಿದರು.